ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ನಷ್ಟ ಅನುಭವಿಸಿದವರು ತಮ್ಮ ಆಸ್ತಿಯ ಮಾಹಿತಿಗಳ ಜತೆ ನಷ್ಟ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತೆ ಎಚ್.ಎಸ್.ಕೆಂಪಣ್ಣ ಆಯೋಗ ಮನವಿ ಮಾಡಿದೆ.
ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಶುಕ್ರವಾರ ಬಾಲಬ್ರೂಯಿ ಅತಿಥಿಗೃಹದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರು ನಷ್ಟ ಪರಿಹಾರಕ್ಕಾಗಿ ಆಯೋಗದ ಮುಂದೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದರು.
ಕಳೆದ ವರ್ಷ ಆಗಸ್ಟ್ 11ರಂದು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರದೇಶಗಳಲ್ಲಿ ಗುಂಪು ಗಲಭೆಯಾಗಿತ್ತು. ಸಾರ್ವಜನಿಕರ ಆಸ್ತಿಪಾಸ್ತಿ ಸಾಕಷ್ಟು ನಷ್ಟವಾಗಿದೆ. ಇದರ ನಷ್ಟವನ್ನು ತಪ್ಪಿತಸ್ಥ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ವಸೂಲಿ ಮಾಡಿ ನಷ್ಟ ಭರಿಸಿಕೊಡುವಂತೆ ಸಲ್ಲಿಸಲಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್, ಸುಪ್ರೀಂಕೋರ್ಟ್‍ನ ಮಾರ್ಗಸೂಚಿಗಳ ಅನ್ವಯ ಕ್ಲೇಮ್ ಕಮೀಷನರ್‍ಗಳನ್ನಾಗಿ ತಮ್ಮನ್ನು ನೇಮಿಸಿದೆ. ತಾವು ನಷ್ಟಕ್ಕೊಳಗಾದವರು ದಾಖಲೆಗಳ ಸಹಿತ ಸಲ್ಲಿಸುವ ಅರ್ಜಿಗಳನ್ನು ಪರಿಶೀಲನೆ ಮಾಡಿ ಮೌಲ್ಯ ಮಾಪಕರುಗಳಿಂದ ನಷ್ಟದ ಅಂದಾಜು ಮಾಡಿಸಿ ಹೈಕೋರ್ಟ್‍ಗೆ ವರದಿ ಸಲ್ಲಿಸಲಾಗುವುದು ಎಂದರು.
ಈವರೆಗೆ ತಮ್ಮ ಆಯೋಗದ ಮುಂದೆ ಕೇವಲ ಮೂರು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ 50ಕ್ಕೂ ಹೆಚ್ಚು ಮಂದಿ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ.
ಆದರೆ, ಆಯೋಗದ ಮುಂದೆ ಅಧಿಕೃತವಾಗಿ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ. ಬಹುಶಃ ಮಾಹಿತಿಯ ಕೊರತೆ ಇರಬಹುದು ಎಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಈ ಎರಡು ಪ್ರದೇಶಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ. ಹೀಗಾಗಿ ನಷ್ಟಕ್ಕೊಳಗಾದವರು ಆಯೋಗದ ಮುಂದೆ ಅರ್ಜಿ ಸಲ್ಲಿಸಿದರೆ ಸೂಕ್ತ ನ್ಯಾಯ ಕೊಡಿಸಲಾಗುವುದು ಎಂದರು..
ಫೆ.28 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕಾಗಿ ಅವಧಿ ಮುಗಿದ ಬಳಿಕ ಬಂದ ಅರ್ಜಿಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತೇವೆ. ಪರಿಶೀಲನೆ ಮಾಡುತ್ತೇವೆ ಎಂದು ಕೆಂಪಣ್ಣ ಹೇಳಿದರು.ಅರ್ಜಿದಾರರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ, ಆಡಿಯೋ, ವೀಡಿಯೋ ದಾಖಲಾತಿಗಳಿದ್ದರೆ ಅವುಗಳ ಜತೆಯಾಗಿ ಸಾಕ್ಷಿಗಳನ್ನು ದೃಢಪಡಿಸುವ ಹೇಳಿಕೆಯೊಂದಿಗೆ ನಷ್ಟಕ್ಕೊಳಗಾದ ಆಸ್ತಿಯ ಮೌಲ್ಯವನ್ನು ಸೇರಿಸಿ ಅರ್ಜಿ ಸಲ್ಲಿಸಬೇಕು ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ