ಕೊವಿಡ್‌-೧೯ರ ಪರಿಣಾಮ: ಭಾರತದ ೧.೮ ಕೋಟಿ ಜನರಿಗೆ ಹೊಸ ಉದ್ಯೋಗ ಹುಡುಕಾಟ ಅನಿವಾರ್ಯ

ಮುಂಬೈ: ಕೋವಿಡ್-19 ಸಾಂಕ್ರಾಮಿಕವು ದೇಶದ ಉದ್ಯೋಗ ಮಾರುಕಟ್ಟೆಯ ಮೇಲೆ ಬಹುಕಾಲ ಪರಿಣಾಮ ಬೀರಲಿದೆ. ಭಾರತದ ಕಾರ್ಮಿಕರ ಪೈಕಿ 1.8 ಕೋಟಿ ಜನ 2030ರೊಳಗೆ ಹೊಸ ಉದ್ಯೋಗ ಕಂಡುಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ವರದಿಯೊಂದು ಹೇಳಿದೆ.
ಚಿಲ್ಲರೆ ಮಾರಾಟ, ಆಹಾರ ಸೇವೆಗಳು, ಆತಿಥ್ಯ, ಕಚೇರಿ ನಿರ್ವಹಣೆ ಮೊದಲಾದ ವಲಯಗಳಲ್ಲಿ ಕೆಲಸ ಮಾಡುವ ಕೆಳಗಿನ ಹಂತದ ನೌಕರರ ಮೇಲೆ ಕೊವಿಡ್‌-೧೯ರ ಪರಿಣಾಮವು ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ ಎಂದು ಮೆಕಿನ್ಸಿ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ (ಎಂಜಿಐ) ವರದಿಯಲ್ಲಿ ಹೇಳಲಾಗಿದೆ.
ಕೆಲಸದ ವಿಚಾರದಲ್ಲಿ ಕಂಪನಿಗಳು ಹೊಸ ಸವಾಲುಗಳನ್ನು ನಿಭಾಯಿಸಬೇಕಿದೆ. ಗ್ರಾಹಕರ ವರ್ತನೆಯಲ್ಲಿ ಹಾಗೂ ವಾಣಿಜ್ಯ ವಹಿವಾಟಿನ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳಲ್ಲಿ ಕೆಲವು ಉಳಿದುಕೊಳ್ಳಲಿವೆ. ಮನೆಯಿಂದ ಕೆಲಸ ಮಾಡುವ ಮಾದರಿ, ಇ-ಮಾರುಕಟ್ಟೆಯ ಮೇಲಿನ ಅವಲಂಬನೆ ಮತ್ತು ವರ್ಚುವಲ್‌ ಸಭೆಗಳನ್ನು ನಡೆಸುವುದು, ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಳ ಮುಂದುವರಿಯಲಿದೆ ಎಂದು ವರದಿಯು ಉಲ್ಲೇಖಿಸಿದೆ.
ಇದರಿಂದಾಗಿ ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗಗಳ ಸ್ವರೂಪದಲ್ಲಿ ಬದಲಾವಣೆ ಆಗಲಿದೆ. ಇದು ದಶಕದ ವರೆಗೂ ಮುಂದುವರಿಯಲಿದೆ. ಜಾಗತಿಕವಾಗಿ 10 ಕೋಟಿಗಿಂತ ಹೆಚ್ಚು ಜನ ಹೊಸ ಕೆಲಸದ ಹುಡುಕಾಟ ನಡೆಸಬೇಕಾಗಬಹುದು. ಇದರಲ್ಲಿ 1.8 ಕೋಟಿ ಜನ ಭಾರತದವರೇ ಆಗಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೋವಿಡ್-19 ಪರಿಣಾಮ ದೀರ್ಘಕಾಲೀನ ಇರಲಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಕೆಳಸ್ತರದ ಹಾಗೂ ಕಡಿಮೆ ಸಂಬಳದ ಉದ್ಯೋಗಗಳು ಸ್ಥಗಿತಗೊಳ್ಳಬಹುದು ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಕಾರ್ಮಿಕರು ಹೆಚ್ಚಿನ ಕೌಶಲದ ಕೆಲಸಗಳನ್ನು ನಿಭಾಯಿಸಲು ಸಿದ್ಧರಾಗಬೇಕಾಗುತ್ತದೆ. ಆರೋಗ್ಯ ಸೇವೆಗಳು, ತಂತ್ರಜ್ಞಾನ, ಬೋಧನೆ ಮತ್ತು ತರಬೇತಿಯಂತಹ ಕೆಲಸ ನಿಭಾಯಿಸುವುದನ್ನು ಕಲಿಯಬೇಕಾಗುತ್ತದೆ.
ಮನೆಯಿಂದಲೇ ಕೆಲಸ ಮಾಡುವುದು ಅಥವಾ ಯಾವುದೇ ಊರಿನಲ್ಲಿದ್ದುಕೊಂಡು ಕಚೇರಿಯ ಕೆಲಸ ನಿಭಾಯಿಸುವ ವ್ಯವಸ್ಥೆ ಮುಂದುವರಿಯಲಿದೆ. ಆರ್ಥಿಕ ಕಾರಣಕ್ಕೆಂದು ಪ್ರಯಾಣ ಮಾಡುವುದು ಕಡಿಮೆಯಾಗಲಿದೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement