ಮಹಾರಾಷ್ಟ್ರ ಕೇರಳದಲ್ಲಿ ಕೊರೋನಾ ಸೋಂಕು ಮತ್ತೆ ಹೆಚ್ಚಳ: ಹೆಚ್ಚಿದ ೨ನೇ ಅಲೆಯ ಭೀತಿ

ನವದೆಹಲಿ: ಮಹಾರಾಷ್ಟ್ರ ಮತ್ತು ಕೇರಳ ಸೇರಿ ಕೆಲರಾಜ್ಯಗಳಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಸಿತ ಕಂಡಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿದೆ.
ಹಲವು ತಿಂಗಳುಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಾ ೧.೪೦ ಲಕ್ಷಕ್ಕಿಂತ ಕಡಿಮೆ ಬಂದಿತ್ತು. ಆದರೆ ಇದೀಗ ಹಲವು ರಾಜ್ಯಗಳಲ್ಲಿ ಸೋಂಕು ಏರಿಕೆ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧.೪೩ ಲಕ್ಷ ದಾಟಿದೆ.
ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. ೧.೨೭ ರಷ್ಟು ಇತ್ತು, ಇದೀಗ ಈ ಪ್ರಮಾಣ ಶೇ. ೧.೩೦ಕ್ಕೆ ಏರಿಕೆಯಾಗಿದೆ. ಇದು ಸಹಜವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ದೇಶದಲ್ಲಿ ಎರಡನೇ ಹಂತದ ಕೊರೊನಾ ಅಲೆ ಕಾಣಿಸಿಕೊಳ್ಳುತ್ತಿದೆ ಎನ್ನುವ ಕುರಿತು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಸೋಂಕು ಹೆಚ್ಚಳ ಇನ್ನಷ್ಟು ಆತಂಕ ಸೃಷ್ಟಿ ಮಾಡಿದ್ದು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
೧೩,೯೯೩ ಹೊಸ ಪ್ರಕರಣ: ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೊಸದಾಗಿ ೧೩,೯೯೩ ಮಂದಿಗೆ ಕಾಣಿಸಿಕೊಂಡಿದ್ದು, ಇದು ಕಳೆದ ೨೦ ದಿನಗಳಲ್ಲಿಯೇ ಅತಿ ಹೆಚ್ಚು. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ ೧,೦೯,೭೭,೩೮೭ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ೬ ಸಾವಿರ ಮತ್ತು ಕೇರಳದಲ್ಲಿ ೪,೫೮೪ ಹೊಸ ಪ್ರಕರಣ ದಾಖಲಾಗಿರುವುದು. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿದೆ.
ಕಳೆದ ೨೪ ಗಂಟೆಗಳಲ್ಲಿ ೧೦,೩೦೭ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಚೇತರಿಕೆ ಪ್ರಮಾಣ ೧,೦೬,೭೮,೦೪೮ಕ್ಕೆ ಏರಿಕೆಯಾಗಿದೆ. ಕಳೆದ ೨೪ ತಾಸಿನಲ್ಲಿ ೧೦೧ ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ ೧,೫೬,೨೧೨ಕ್ಕೆ ಏರಿಕೆಯಾಗಿದೆ .

ಪ್ರಮುಖ ಸುದ್ದಿ :-   ಮಹಾರಾಷ್ಟ್ರ | ಗುರುವಾರ ದೇವೇಂದ್ರ ಫಡ್ನವೀಸ್‌, ಇಬ್ಬರು ಡಿಸಿಎಂಗಳ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement