ಸಿದ್ದರಾಮಯ್ಯ ಸಿಎಂ ಇದ್ದಾಗಲೇ ಕುರುಬರಿಗೆ ಹೆಚ್ಚು ಅನ್ಯಾಯ: ಎಚ್‌.ವಿಶ್ವನಾಥ ಆರೋಪ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಕುರುಬರಿಗೆ ಹೆಚ್ಚು ಅನ್ಯಾಯವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ ಕುರುಬರ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಅವರ ಸಿಎಂ ಅವಧಿಯಲ್ಲಿಯೇ ಕುರುಬರಿಗೆ ಹೆಚ್ಚು ಅನ್ಯಾಯವಾಗಿದೆ. ಕೇವಲ ದರ್ಪ, ಅಹಂಕಾರದಿಂದ ಸರಕಾರ ನಡೆಸಲು ಸಾಧ್ಯವಿಲ್ಲ. ಸಿದ್ದು ತಮ್ಮ ಅಹಂಕಾರದಿಂದಲೇ ಅಧಿಕಾರ ಕಳೆದುಕೊಂಡರು. ಸಿದ್ದರಾಮಯ್ಯನನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ. ದೇವೆಗೌಡರು ಸಿದ್ದರಾಮಯ್ಯನನ್ನು ಪಕ್ಷದಿಂದ ಹೊರದಬ್ಬಿದ ಮೇಲೆ ನಾನು ಸಾಕಷ್ಟು ಜನರ ಕಾಲು ಹಿಡಿದು ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆದುಕೊಂಡು ಬಂದೆ ಎಂದು ತಿಳಿಸಿದರು.
ಇತ್ತೀಚೆಗೆ ಕೇವಲ ಜನರ ಸೀಟಿ ಹಾಗೂ ಕೇಕೆಗೆ ಸಿದ್ದರಾಮಯ್ಯ ಭಾಷಣ ಮಾಡ್ತಾರೆ. ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇರುವಾಗಲೇ ಅಧಿಕಾರಕ್ಕೆ ಬರ್ತೇವೆ ಅಂತ ಬೊಬ್ಬೆ ಹೊಡೆಯುತ್ತಿದ್ದಾರೆ. ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಶ್ವನಾಥ್ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಕಡಿತ ಆಗಬೇಕು. ರಾಜ್ಯದಲ್ಲಿ ಶೇಕಡ 85ರಷ್ಟು ಬಿಪಿಎಲ್ ಕಾರ್ಡ್ ಇವೆ. ಹಾಗಾದ್ರೆ ರಾಜ್ಯ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಚಿಂತನೆ ನಡೆಸಬೇಕು. ಇದನ್ನು ಯಾರೂ ಕೇಳಬಾರದಾ ಅಂತ ವಿಷಾದ ವ್ಯಕ್ತಪಡಿಸಿದರು.
ಒಂದೊಂದು ಮನೆಯಲ್ಲಿ 4 ಬಿಪಿಎಲ್ ಕಾರ್ಡ್ ಇದೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿಲ್ಲ. ಅನ್ನಭಾಗ್ಯ ಅಕ್ಕಿಯಿಂದ ಸಾಕಷ್ಟು ಮಂದಿ ಕೋಟ್ಯಧಿಪತಿ ಆಗಿದ್ದಾರೆ. ರಾಜ್ಯದ ಅಕ್ಕಿ, ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಕ್ರಮ ಸಾಗಣೆ ಆಗ್ತಿದೆ ಎಂದು ಆರೋಪಿಸಿದ ವಿಶ್ವನಾಥ, ಇದೆಲ್ಲ ಜನರ ತೆರಿಗೆ ಹಣ, ಅದು ಪೋಲಾಗುತ್ತಿದೆ. ರಾಜ್ಯದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement