ದ್ವೇಷ ಬಿತ್ತುವ ಬಿಜೆಪಿಯವರು ಅಲ್ಪಮಾನವರು: ಸಿದ್ದರಾಮಯ್ಯ

ಬೆಂಗಳೂರು: ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು, ದ್ವೇಷಭಾವನೆ ಬಿತ್ತುವ ಬಿಜೆಪಿಯವರು ಅಲ್ಪಮಾನವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯತೀತತೆ. ಇದು ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಅನುಗುಣವಾಗಿದೆ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಬಿಜೆಪಿಯವರು ಅಲ್ಪಮಾನವರು ಎಂದು ತಿಳಿಸಿದ್ದಾರೆ.
ಸರ್ವಧರ್ಮ ಸಮನ್ವಯತೆಯ ತವರಾಗಿದ್ದ ದಕ್ಷಿಣ ಕನ್ನಡವನ್ನು ಬಿಜೆಪಿ ನಾಯಕರು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿನ ಜನ ಪರಸ್ಪರ ಅಪನಂಬಿಕೆಯಿಂದ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಆರ್‌ಎಸ್ಎಸ್ ಮತ್ತು ಬಿಜೆಪಿಯೇ ಕಾರಣ ಎಂದರು.
ದೇಶಪ್ರೇಮದ ಪಾಠ ಮಾಡುವ ಬಿಜೆಪಿ ನಾಯಕರು ತಮ್ಮ ಇತಿಹಾಸವನ್ನೊಮ್ಮೆ ನೆನಪು ಮಾಡಿಕೊಳ್ಳಲಿ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕಾಂಗ್ರೆಸ್ ನಾಯಕರು ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ಒಬ್ಬನೇ ಒಬ್ಬ ಆರ್‌ಎಸ್‌ಎಸ್ ನಾಯಕನ ಹೆಸರನ್ನು ಬಿಜೆಪಿಯವರು ಹೇಳಲಿ ನೋಡೋಣ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಹೆಡ್ಗೇವಾರ್, ಗೊಳವಲ್ಕರ್ ಇವರೆಲ್ಲ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದದ್ದು ಯಾಕೆ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದವರು ಇವತ್ತು ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ. ಮಹಾತ್ಮ ಗಾಂಧಿಯವರಂತೆ ನಾನು ರಾಮಭಕ್ತನೆ. ದೇಶಕ್ಕೆ ಬೇಕಿರುವುದು ಗಾಂಧಿಯವರ ಆದರ್ಶ ಪುರುಷ ರಾಮ. ಗಾಂಧಿಯವರನ್ನು ಕೊಂದ ಸಂಘಪರಿವಾರದವರು ರಾಮಭಕ್ತರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement