ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾಧ್ರಾ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ದೆಹಲಿಯಲ್ಲಿ ಬೈಸಿಕಲ್ ಸವಾರಿ ಮಾಡಿ ಪ್ರತಿಭಟಿಸಿದರು.
ಸೋನಿಯಾ ಗಾಂಧಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ ಹೇಳಿಕೆ ನೀಡಿದ ಮರುದಿನ ರಾಬರ್ಟ್ ವಾಧ್ರಾ ದೆಹಲಿಯ ಖಾನ್ ಮಾರುಕಟ್ಟೆಯಿಂದ ತಮ್ಮ ಕಚೇರಿಗೆ ಸೈಕಲ್ ಮೂಲಕ ತೆರಳಿದರು.
ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ೧೦೦ರೂ. ದಾಟಿರುವುದರಿಂದ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡರಾದ ಪಿ.ಸಿ.ಶರ್ಮಾ, ಜಿತು ಪಟ್ವಾರಿ, ಕುನಾಲ್ ಚೌಧರಿ ವಿಧಾನಸೌಧ ಎದುರು ಸೈಕಲ್ ಸವಾರಿ ಮಾಡಿ ಪ್ರತಿಭಟಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಭಾಗಶಃ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸೋನಿಯಾ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಇಂಧನ ಬೆಲೆಗಳ ಹೆಚ್ಚಳ ಆರ್ಥಿಕ ಕುಸಿತ, ವ್ಯಾಪಕ ನಿರುದ್ಯೋಗ, ವೇತನ ಕಡಿತ ಮತ್ತು ಉದ್ಯೋಗ ನಷ್ಟಗಳು, ಹೆಚ್ಚಿನ ಬೆಲೆಗಳು ಮತ್ತು ಆದಾಯ ಕುಸಿತಕ್ಕೆ ಕಾರಣವಾಗುತ್ತದೆ. ರೈತರು, ಬಡವರು ಮತ್ತು ಮಧ್ಯಮ ಮತ್ತು ಸಂಬಳ ಪಡೆಯುವ ವರ್ಗದವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಂಬೈನಲ್ಲಿ ಶನಿವಾರ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ 97 ರೂ.ಗೆ ತಲುಪಿದ್ದರೆ, ಡೀಸೆಲ್ 88 ರೂ.ಗೆ ಏರಿಕೆ ಕಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ