ನಾನು ಒಕ್ಕಲಿಗನ ಮಗ ಎಲ್ಲಿಯೂ ಓಡಿ ಹೋಗಲ್ಲ: ಚಿತ್ರನಟ ಜಗ್ಗೇಶ

ಬೆಂಗಳೂರು: ನಾನು ಒಕ್ಕಲಿಗನಾಗಿ ಅಪ್ಪನಿಗೆ ಹುಟ್ಟಿದ ಮಗನಾಗಿ ಎಲ್ಲಿಯೂ ಓಡಿ ಹೋಗಲ್ಲ ಎಂದು ಚಿತ್ರನಟ ಜಗ್ಗೇಶ ಹೇಳಿದರು.
ಚಿತ್ರನಟನೊಬ್ಬನ ಬಗ್ಗೆ ಕೀಳಾಗಿ ಮಾತನಾಡಿದ್ದೇನೆಂದು ಆರೋಪಿಸಿ ಕೆಲವರು ತಮ್ಮ ಮೇಲೆ ಹಲ್ಲೆ ಮಾಡಲೆತ್ನಿಸಿದ ಪ್ರಕರಣ ಕುರಿತು ಮಾತನಾಡಿ, ೨೦ ಜನ ಹುಡುಗರು ಉದ್ವೇಗದಿಂದ ಬಂದಿದ್ದರು. ನನಗೆ ಬೈದರು. ಆದರೆ ನಾನು ಹೆದರಿ ಹೋಗಲಿಲ್ಲ. ಎಲ್ಲಿಯೂ ಓಡಿ ಹೋಗುವುದಿಲ್ಲ. ಎಸ್ಕೇಪ್‌ ಆಗಿಲ್ಲ, ಓಡಿ ಹೋಗುವ ಜಾಯಮಾನ ನನ್ನದಲ್ಲ ಎಂದರು.
ಇಡೀ ಕರ್ನಾಟಕಕ್ಕೆ ಗೊತ್ತಿದೆ ನಾನು ಏನು ಅಂತ. ಬಹಳ ಪರಿಶುದ್ಧವಾಗಿ ಬದುಕಿದವನು ನಾನು. ತಿನ್ನುವುದಕ್ಕೆ ಅನ್ನ ಇಲ್ಲದ ಸಂದರ್ಭದಲ್ಲಿ ಗೋಣಿ ಚೀಲದ ಮೇಲೆ ಮಲಗಿ ಜೀವನ ಕಳೆದಿದ್ದೇನೆ. ಕಷ್ಟಪಟ್ಟು ೪೦ ವರ್ಷಗಳ ಕಾಲ ಚಿತ್ರರಂಗದಲ್ಲಿದ್ದೇನೆ. ೧೫೦ ಚಿತ್ರಗಳಲ್ಲಿ ನಟಿಸಿದ್ದೇನೆ. ೨೭ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಎರಡು ಬಾರಿ ಶಾಸಕನಾಗಿದ್ದೇನೆ. ಎಲ್ಲಿಯೂ ಕೂಡ ಲೋಫರ್‌ ಕೆಲಸ ಮಾಡಿಲ್ಲ. ತಲೆ ಹಿಡಿದಿಲ್ಲ, ಕಳ್ಳತನ ಮಾಡಿಲ್ಲ ಎಂಬುದಕ್ಕೆ ರಾಘವೇಂದ್ರ ಸ್ವಾಮಿಗಳೇ ಸಾಕ್ಷಿ ಎಂದು ಬೇಸರ ಪಟ್ಟುಕೊಂಡರು.
ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದಿದ್ದ ಮೇಲೆ ನಾನೇಕೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳಲಿ. ೮೦ರ ದಶಕದಲ್ಲಿ ಸಿನೆಮಾ ರಂಗಕ್ಕೆ ಬಂದವನು ನಾನು. ನಾನು ಡಾ. ರಾಜಕುಮಾರ, ವಿಷ್ಣುವರ್ಧನ್‌, ಪ್ರಭಾಕರ, ಶಂಕರನಾಗ್‌ ಅವರೊಂದಿಗೆ ಚಿತ್ರಗಳನ್ನು ಮಾಡಿದವನು. ಅವರೊಂದಿಗೆ ಬದುಕಿದವನು ನಾನು. ಕನ್ನಡಿಗರ ಪ್ರೀತಿಯಿಂದಾಗಿಯೇ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ನಾನು ಬಕೀಟ್‌ ಹಿಡಿಯುವುದಾಗಿದ್ದರೆ ೨೦ ಬಾರಿ ಸಚಿವನಾಗುತ್ತಿದ್ದೆ ಎಂದರು.
ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ. ಕನ್ನಡದ ಕೆಲಸ ಮಾಡಲು ಅವಕಾಶ ನೀಡಿರಿ. ಇನ್ನೂ ಹತ್ತಾರು ವರ್ಷ ಕನ್ನಡಮ್ಮನ ಸೇವೆ ಮಾಡಬೇಕೆಂಬುದು ನನ್ನ ಹೆಬ್ಬಯಕೆ. ಇದೇ ಪರಂಪರೆ ಮುಂದುವರೆದರೆ ಬೇರೆ ನಟರನ್ನೂ ಹೆದರಿಸುತ್ತಾರೆ. ಇಂಥ ಸಂಸ್ಕೃತಿ ಮುಂದುವರೆಯಬಾರದು ಎಂದು ತಿಳಿಸಿದರು.
ಕನ್ನಡ ಸಿನೆಮಾದಲ್ಲಿ ಒಬ್ಬ ನಟನ ಚಿತ್ರ ಹಿಟ್‌ ಆದರೆ ಬೇರೆ ನಟರು ಹುನ್ನಾರ ಮಾಡುತ್ತಾರೆ. ರೌಡಿಸಂ ಮಾಡುತ್ತಾರೆ. ನಾನೊಬ್ಬನೇ ಬೆಳೆಯಬೇಕು ಎಂಬ ಕೆಟ್ಟ ಸ್ವಾರ್ಥ ಕೆಲವು ನಟರಲ್ಲಿದೆ. ನನಗೆ ಅವಮಾನ ಮಾಡಿದರೆ ಕನ್ನಡಿಗರೆಲ್ಲರಿಗೆ ಅವಮಾನ ಮಾಡಿದಂತೆ. ಹಿರಿಯ ನಟರಿಗೆ ಅವಮಾನ ಮಾಡುವ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement