ಆರೋಪ-ಪ್ರತ್ಯಾರೋಪ ಬಿಟ್ಟು ಪಂಚಮಸಾಲಿ ಸಮಾಜ ೨ಎ ಸೇರ್ಪಡೆಗೆ ಒಂದಾಗಿ

ಬೆಂಗಳೂರು:ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬಿಟ್ಟು ಸಮುದಾಯದ ಹಿತಕ್ಕಾಗಿ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಪಕ್ಷಾತೀತವಾಗಿ ಹೋರಾಡಬೇಕೆಂದು ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಒತ್ತಾಯಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದಿಂಡೂರು, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ನಮ್ಮಲ್ಲಿ ಒಡಕು ಮೂಡುವುದು ಸರಿಯಲ್ಲ. ಸಮುದಾಯದ ಹಿತಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲವನ್ನೂ ಮರೆತು ಹೋರಾಟ ಮಾಡಬೇಕು. ಸಮುದಾಯಕ್ಕೆ ಎಲ್ಲರೂ ಕೂಡ ಪಕ್ಷಾತೀತವಾಗಿ ಕೈಜೋಡಿಸಿದ್ದಾರೆ. ಹಾಲಿ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರು ಕೊಡುಗೆ ನೀಡಿದ್ದಾರೆ. ಹಿಂದೆ ಕೈಗಾರಿಕ ಸಚಿವರಾಗಿದ್ದ ನಿರಾಣಿ ಸಾಮಾನ್ಯ ವರ್ಗದಲ್ಲಿದ್ದ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಅವರ ಹೋರಾಟದ ಫಲವಾಗಿ ನಾವು ಈ ವರ್ಗಕ್ಕೆ ಸೇರ್ಪಡೆಯಾದೆವು. ಮುಖ್ಯಮಂತ್ರಿ ಯಡಿಯೂರಪ್ಪ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಲು ಮಾಜಿ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಇದು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.
ಪಂಚಮಸಾಲಿ ಸಮುದಾಯದ ಅಭ್ಯುದಯಕ್ಕೆ ನಿರಾಣಿಯವರ ಕೊಡುಗೆಯನ್ನು ಮರೆಯಬಾರದು. ಈಗಲೂ ಕೂಡ ಸಮುದಾಯಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಸಚಿವ ಸಿ.ಸಿ.ಪಾಟೀಲ್ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯಗಳು ಮೂಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಸ್ಥಾಪಿಸಲು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೊಡುಗೆ ಮರೆಯುವಂತಿಲ್ಲ. ಪಂಚಮಸಾಲಿ ಮಠದ ಹರಿಹರ ಪೀಠ ಮತ್ತು ಕೂಡಲಸಂಗಮ ಮಠದ ನಡುವೆ ಭಿನ್ನಾಭಿಪ್ರಾಯ ಬರಬಾರದು ಎಂದು ಮನವಿ ಮಾಡಿದರು. ದಯಾನಂದ್ ಪಾಟೀಲ್, ಮಲ್ಲನಗೌಡ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ : ಕಾಂಗ್ರೆಸ್ಸಿನ ಪುಟ್ಟಣ್ಣಗೆ ಜಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement