ತಹಶೀಲ್ದಾರನ ಕೊಲೆಗೆ ಯತ್ನ: ತಂದೆ-ಮಗನ ಬಂಧನ

ಬಾಗಲಕೋಟೆ: ಸಹೋದರರ ನಡುವಿನ ಆಸ್ತಿ ವಿವಾದದಲ್ಲಿ ಆಸ್ತಿ ಪತ್ರದಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಘಟನೆ ಜಮಖಂಡಿಯಲ್ಲಿ ನಡೆದಿದೆ. ರೈತ ಲಕ್ಷ್ಮಣ ಕಿತ್ತೂರು (70) ಹಾಗೂ ಮಗ ಬಸವರಾಜ್‌ ಕಿತ್ತೂರು (48) ಎಂಬುವರಿಂದ ಕೃತ್ಯ ನಡೆದಿದೆ. ಘಟನೆ ಖಂಡಿಸಿ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಬಿರಡಿ ಮೇಲೆ ಸೀಮೆ ಎಣ್ಣೆ ಸುರಿದು ತಂದೆ-ಮಗ ಇಬ್ಬರು ಕೊಲೆಗೆ ಯತ್ನಿಸಿದ್ದಾರೆ. ಹೊರಗಡೆ ಓಡಿಬಂದು ತಹಶೀಲ್ದಾರ್‌ ಪ್ರಾಣ ಉಳಿಸಿಕೊಂಡಿದ್ದಾರೆ. ಫೆಬ್ರವರಿ 22 ರಂದು ಜಮಖಂಡಿ ನಗರ ಪೊಲೀಸ್‌ ಠಾಣೆಯಲ್ಲಿ ನಾಗಪ್ಪ ಬಿರಡಿ ಅವರು ದೂರು ಸಲ್ಲಿಸಿದ್ದರು.
ಗ್ರೇಡ್‌ 2 ತಹಶೀಲ್ದಾರ್‌ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಜಮಖಂಡಿ ನಗರ ಪೊಲೀಸ್‌ ಠಾಣೆ ಪೊಲೀಸರು ತಂದೆ ಮಗನನ್ನು ಬಂಧಿಸಿ‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರೆದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement