ಬಿಎಂಟಿಸಿ ಪ್ರಯಾಣ ದರ ಹೆಚ್ಚಳ ಈಗ ನಿಚ್ಚಳ

ಬೆಂಗಳೂರು: ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಬಿಸಿ ಸದ್ಯದಲ್ಲೇ ತಟ್ಟುವ ಸಾಧ್ಯತೆ ನಿಚ್ಚಳವಾಗಿದೆ.
ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಎಂಟಿಸಿ ದರ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಾಗುತ್ತದೆ ಎಂದು ಹೇಳಿದ್ದಾರೆ.
ಬಿಎಂಟಿಸಿ ಬಸ್‌ ಹೊರತುಪಡಿಸಿ ಉಳಿದ ರಸ್ತೆ ಸಾರಿಗೆ ನಿಗಮಗಳ ಪ್ರಯಾಣ ದರ ಏರಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಬಿಎಂಟಿಸಿ ಪ್ರಯಾಣ ದರವನ್ನು ಶೇ. ೧೮-೨೦ ಏರಿಸಬೇಕೆಂಬ ಪ್ರಸ್ತಾವ ವನ್ನು ಬಿಎಂಟಿಸಿ ಸರ್ಕಾರಕ್ಕೆ ಸಲ್ಲಿಸಿದೆ. ದರ ಏರಿಕೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಈ ಪ್ರಸ್ತಾವನೆ ಹೆಚ್ಚಿನ ಹೊರೆಯಿಂದ ಕೂಡಿದೆ.ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ಅವರು ಸಮ್ಮತಿಸಿದರೆ ಮಾತ್ರ ಪ್ರಯಾಣಿಕರಿಗೆ ಹೊರೆಯಾಗದಂತೆ ದರ ಏರಿಕೆ ಮಾಡಲಾಗುವುದು ಎಂದು ತಿಳಿಸಿದರು.
ಬಿಎಂಟಿಸಿ ಹೊರತುಪಡಿಸಿ ಉಳಿದ ಯಾವುದೇ ಸಾರಿಗೆ ನಿಗಮಗಳ ಬಸ್ ಪ್ರಯಣ ದರ ಏರಿಸುವ ಪ್ರಶ್ನೆಯೇ ಇಲ್ಲ. ಉಳಿದ ಸಾರಿಗೆ ನಿಗಮಗಳು ಕಳೆದ ಸಾಲಿನಲ್ಲೇ ಶೇ. ೧೨ ರಷ್ಟು ಏರಿಕೆ ಮಾಡಿದ್ದವು. ಬಿಎಂಟಿಸಿ ಏರಿಕೆ ಮಾಡಿರಲಿಲ್ಲಎಂದರು.
ಆಟೋ ದರ ಏರಿಕೆ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಟೋ ಮತ್ತು ಸಿಟಿ ಟ್ಯಾಕ್ಸಿಗಳ ಶೇ. ೧೫ ರಷ್ಟು ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದರು. ವೋಲ್ವೊ ಹಾಗೂ ಉಬರ್‌ ದರ ಏರಿಕೆ ಬಗ್ಗೆ ಇನ್ನು ತೀರ್ಮಾನ ಕೈಗೊಂಡಿಲ್ಲ. ಇಲ್ಲಿ ಚಾಲಕರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಹಾಗಾಗಿ ಸಂಸ್ಥೆಯ ಮುಖ್ಯಸ್ಥರನ್ನು ಕರೆಸಿ ಅವರಿಗೆ ಎಚ್ಚರಿಕೆ ನೀಡಲಾಗುವುದು ಎಂದರು.
ಕಾರ್ಗೋ ಸೇವೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಗೋ ಸೇವೆಯನ್ನು ಫೆ.೨೬ರಿಂದ ಆರಂಭಿಸುತ್ತಿದ್ದೇವೆ.ಇದರಿಂದ ವಾರ್ಷಿಕ ೮೦ ಕೋಟಿ ರೂ. ಆದಾಯ ನಿರೀಕ್ಷೆ ಇದೆ. ಸಾರಿಗೆ ನಿಗಮದ ಈ ಕಾರ್ಗೋ ಸೇವೆಗೆ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.ಪ್ರಥಮ ಹಂತದಲ್ಲಿ ೧೦೯ ಸ್ಥಳಗಳಲ್ಲಿ ಕಾರ್ಗೋ ಸೇವೆ ಆರಂಭಿಸಲಾಗುತ್ತಿದೆ ಎಂದ ಅವರು,
ಸಾರಿಗೆ ನಿಗಮದ ನೌಕರರ ಹತ್ತು ಬೇಡಿಕೆಯಲ್ಲಿ ೯ ಬೇಡಿಕೆಗಳನ್ನು ಈಡೇರಿಸಲು ತೀರ್ಮಾನಿಸಿದ್ದೇವೆ. ಅದರಲ್ಲಿ ಆರು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ, ಕೊರೊನಾದಿಂದ ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೆ ೨೭೨೦ ಕೋಟಿ ರೂ. ನಷ್ಟವಾಗಿದೆ ಮತ್ತು ಈ ನಿಗಮಗಳಿಂದ ಕೊರೊನಾ ಪರಿಸ್ಥಿತಿಯಿಂದ ನಾಲ್ಕು ಸಾವಿರ ಕೋಟಿ ರೂ. ಆದಾಯ ಕೊರತೆಯೂ ಆಗಿದೆ ಎಂದು ತಿಳಿಸಿದರು.
ಸಾರಿಗೆ ಸಂಸ್ಥೆಗೆ ೩ ಸಾವಿರ ಹೊಸ ಬಸ್‌ಗಳನ್ನು ಖರೀದಿಸುವ ಚಿಂತನೆ ಇದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದರು.

ಪ್ರಮುಖ ಸುದ್ದಿ :-   ಜೆಡಿಎಸ್‌ನಿಂದ ಸಿ.ಎಂ. ಇಬ್ರಾಹಿಂ, ಸಿ.ಕೆ. ನಾಣು ಉಚ್ಚಾಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement