ಯತ್ನಾಳ ಪ್ರಖರ ಹಿಂದುತ್ವವಾದಿ: ಸಚಿವ ಈಶ್ವರಪ್ಪ

ಕಾಂಗ್ರೆಸ್‌ ಹಾಗೂ ಮುಸ್ಲಿಂ ಲೀಗ್‌ ಹೊರತುಪಡಿಸಿ ಯಾವುದೇ ಪಕ್ಷಗಳೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.
ಬಿಜೆಪಿಯಲ್ಲಿ ಮಡಿವಂತಿಕೆ ಎಂಬುದಿಲ್ಲ, ಆದರೆ ಕಾಂಗ್ರೆಸ್‌ ದೇಶವನ್ನು ದಿವಾಳಿ ಮಾಡಿದ ಪಕ್ಷವಾಗಿದ್ದರೆ, ಮುಸ್ಲಿಂ ಲೀಗ್‌ ಪಕ್ಷ ದೇಶ ವಿರೋಧಿ ಪಕ್ಷವಾಗಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಜೆಡಿಎಸ್‌ ಬಿಜೆಪಿಗೆ ಕೈಕೊಟ್ಟಿದೆ. ಜೆಡಿಎಸ್‌ ಕೈಕೊಡುವುದರಲ್ಲಿ ಪ್ರಸಿದ್ಧಿ ಪಡೆದ ಪಕ್ಷ. ವಿಧಾನ ಪರಿಷತ್‌ನಲ್ಲಿ ಗೋಹತ್ಯೆ ವಿಷಯದಲ್ಲಿ ನಮಗೆ ಬೆಂಬಲ ಬೇಕಿತ್ತು. ಎಲ್ಲೆಲ್ಲಿ ನಮಗೆ ಅನುಕೂಲವಾಗುತ್ತದೆಯೋ ಅಲ್ಲಿ ನಾವು ಬಳಸಿಕೊಳ್ಳುತ್ತೇವೆ. ಈ ವಿಚಾರದಲ್ಲಿ ನಮ್ಮ ಪಕ್ಷಕ್ಕೆ ಅವಕಾಶವಾದಿ ಎಂದು ಕರೆದರೂ ಚಿಂತೆಯಿಲ್ಲ ಎಂದರು.
ಕಾಂಗ್ರೆಸ್ಸಿನವರು ಏನೇ ಮಾಡಿದರೂ ಅದು ಅವರಿಗೆ ತಿರುಗುಬಾಣವಾಗುತ್ತದೆ. ಕಾಂಗ್ರೆಸ್‌ಗೆ ಒಂದು ತತ್ವ. ಸಿದ್ಧಾಂತ ಎಂಬುದಿಲ್ಲ. ಉತ್ತರ ಹಾಗೂ ದಕ್ಷಿಣ ಭಾರತ ಕುರಿತು ರಾಹುಲ್‌ ಗಾಂಧಿ ನೀಡಿದ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ.  ಸಿದ್ಧಾಂತವಿಲ್ಲದ ಪಕ್ಷಕ್ಕೆ ಒಬ್ಬ ನಾಯಕರೂ ಇಲ್ಲದಂಥ ಸ್ಥಿತಿ ಬಂದೊದಗಿದೆ. ಕಾಂಗ್ರೆಸ್‌ ಈಗ ಪ್ರಾದೇಶಿಕ ಪಕ್ಷವಾಗುತ್ತಿದೆ ಎಂದರು.
ಜೆಡಿಎಸ್‌ನಿಂದ ಕಿತ್ತೆಸೆದ ನಂತರ ಸಿದ್ದರಾಮಯ್ಯ ಅವರದು ಸರ್ವಾಧಿಕಾರಿ ವರ್ತನೆ. ತನ್ನ ನೇತೃತ್ವದಲ್ಲಿಯೇ ಎಲ್ಲವೂ ನಡೆಯಬೇಕೆಂಬುದು ಅವರ ಬಯಕೆ. ಸಾಮೂಹಿಕ ನೇತೃತ್ವ ಎಂಬುದು ಕಾಂಗ್ರೆಸ್‌ನವರಲ್ಲಿಲ್ಲ. ಅದರಲ್ಲಿಯೂ ಸಿದ್ದರಾಮಯ್ಯ ಅವರಿಗಂತೂ ಇಲ್ಲವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   ಗಡಿನಾಡ ಚೇತನ ರಾಜ್ಯ ಪ್ರಶಸ್ತಿಗೆ ಸಾಹಿತಿ-ರಂಗಕರ್ಮಿ ಬೆಳಗಾವಿಯ ಪ್ರೊ.ಬಿ.ಎಸ್.ಗವಿಮಠ ಸೇರಿ ಮೂವರು ಆಯ್ಕೆ

ತಾನು ಹಿಂದುಳಿದವರ ಚಾಂಪಿಯನ್‌ ಎಂದೇ ಪರಿಗಣಿಸಿರುವ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದುಳಿದವರು ಹಾಗೂ ದಲಿತರಿಗೆ ಕೈಕೊಟ್ಟಿದ್ದರಿಂದಲೇ ಜನರು ಅವರನ್ನು ಸೋಲಿಸಿದರು. ಸಿದ್ದರಾಮಯ್ಯ ಸೋತರೂ ಬುದ್ಧಿ ಬಂದಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಕುರ್ಚಿಗೇರುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಬಸನಗೌಡ ಪಾಟೀಲ ಯತ್ನಾಳ ಪ್ರಖರ ಹಿಂದುತ್ವದ ವ್ಯಕ್ತಿ. ಹಿಂದುತ್ವದ ವಿಷಯದಲ್ಲಿ ಅವರು ಎಂದಿಗೂ ರಾಜಿಯಾಗುವುದಿಲ್ಲ. ಅವರಿಗೆ ಪಕ್ಷದಿಂದ ನೋಟೀಸ್‌ ಬಂದಿದ್ದರ ಕುರಿತು ನನಗೆ ಮಾಹಿತಿಯಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಪಕ್ಷದಲ್ಲಿ ಸಾಕಷ್ಟು ವೇದಿಕೆಗಳಿವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮುಖಂಡರಿಗೆ ಹೇಳಲಿ. ಆದರೆ ನಮ್ಮ ಪಕ್ಷದ ವಿಷಯವನ್ನು ನಾವೇ ಬಹಿರಂಗವಾಗಿ ಟೀಕಿಸುವುದು ಸರಿಯಲ್ಲ ಎಂದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement