ಬೆಂಗಳೂರು: ಬೆಂಗಳೂರು ನಗರದಲ್ಲಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲು ಕರೆಯಲಾಗಿದ್ದ 1,800 ಕೋಟಿ ರೂ. ಮೊತ್ತದ ಟೆಂಡರ್ ರದ್ದುಪಡಿಸಿದ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಪಿಐಎಲ್ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಸರಕಾರಿ ವಕೀಲರು, ಆಡಳಿತಾತ್ಮಕ ವಿಷಯದಲ್ಲಿ ಮುಖ್ಯ ಕಾರ್ಯದರ್ಶಿ ಸರಕಾರವನ್ನು ಪ್ರತಿನಿಧಿಸಲಿದ್ದು, ಈಗಾಗಲೇ ಮುಖ್ಯ ಕಾರ್ಯದರ್ಶಿಯವರು ಪ್ರತಿವಾದಿಗಳಾಗಿದ್ದು, ಅವರಿಗೆ ನೋಟಿಸ್ ಜಾರಿಯಾಗಿದೆ ಎಂದರು.
ಸಚಿವರ ಸೂಚನೆ ಮೇರೆಗೆ ಟೆಂಡರ್ ರದ್ದುಪಡಿಸಲಾಗಿದೆ. ಸಚಿವರನ್ನು ಪ್ರತಿವಾದಿ ಮಾಡಲು ಅರ್ಜಿದಾರರು ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ವಿಚಾರಣೆ ಮುಂದುವರಿಸಲು ಸಚಿವರ ವಾದ ಕೇಳಬೇಕಾಗುತ್ತದೆ ಎಂದ ನ್ಯಾಯಪೀಠ, ಸಚಿವರನ್ನು ಪ್ರತಿವಾದಿಯನ್ನಾಗಿ ಸೇರಿಸಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಪುರಸ್ಕರಿಸಿತು. ಸಚಿವರ ಪರವಾಗಿ ನೋಟಿಸ್ ಸ್ವೀಕರಿಸುವಂತೆ ಅಡ್ವೊಕೇಟ್ ಜನರಲ್‌ಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿ ಅಷ್ಟರಲ್ಲಿ ಸಚಿವರು ಆಕ್ಷೇಪಣೆಗಳನ್ನು ಸಲ್ಲಿಸಬೇಕೆಂದು ಸೂಚಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ