ಬೆಂಗಳೂರು: ಪ್ರವರ್ಗ 2ರಲ್ಲಿರುವ ಹಿಂದುಳಿದ ಜಾತಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಬೇಕು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಬಹಿರಂಗಪಡಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ಮಾಜಿ ಸದಸ್ಯರಾದ ಎಂ.ಡಿ.ಲಕ್ಷ್ಮಿನಾರಾಯಣ, ರಮೇಶ್‍ಬಾಬು, ಮಾಜಿ ಮೇಯರ್ ಹುಚ್ಚಪ್ಪ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೇರೆ ಜಾತಿಗಳನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸುವ ಮುನ್ನ 2ಎ ನಲ್ಲಿರುವ ಜಾತಿಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲಿ ಎಂದು ಒತ್ತಾಯಿಸಿದರು.
ಪಿ.ಆರ್.ರಮೇಶ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ನಾಲ್ಕೈದು ವರ್ಷ ತಲಾ 400 ಕೋಟಿ ನೀಡಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಕೇವಲ 20 ಕೋಟಿ ಕೊಟ್ಟಿದೆ. ಇದು ಹಾಸ್ಟೆಲ್‍ನ ವಿದ್ಯಾರ್ಥಿಗಳ ಊಟಕ್ಕೂ ಸಾಲುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಯಾರನ್ನು ಸೇರಿಸಬೇಕು, ಸೇರಿಸಬಾರದು ಎಂಬುದನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅಧ್ಯಯನ ಮಾಡಿ ವರದಿ ನೀಡುತ್ತದೆ. ಸರ್ಕಾರ ಅದರ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತದೆ. ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ಮತ್ತು ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ನಡೆಸಲಾಗಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಬಹಿರಂಗ ಮಾಡಿ ಎಂದು ಒತ್ತಾಯಿಸಿದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಮಾತನಾಡಿ, ಮುಂದುವರೆದ ಸುಮಾರು 43 ಜಾತಿಗಳು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಿವೆ. ಇತ್ತೀಚಿಗೆ ಕೆಲವು ವಿಚಿತ್ರ ಪ್ರಸಂಗಗಳು ನಡೆಯುತ್ತಿವೆ. ಇರುವ ಜಾತಿಗಳಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ವಿಫಲವಾಗಿದೆ. ರಾಜಕೀಯದ ಕಾರಣಕ್ಕಾಗಿ ಕೆಲವು ನಿಗಮಗಳನ್ನು ರಚನೆ ಮಾಡಿ ಅನುದಾನ ಘೋಷಣೆ ಮಾಡಲಾಗುತ್ತದೆ ಎಂದು ಆರೋಪಿಸಿದರು.
ಮಾಜಿ ಮೇಯರ್ ಹುಚ್ಚಪ್ಪ ಮಾತನಾಡಿ, ಮೀಸಲಾತಿಗಾಗಿ ಸ್ವಾಮೀಜಿಗಳನ್ನು ಕರೆತಂದು ಬೀದಿಯಲ್ಲಿ ಕೂರಿಸಿ ಪ್ರತಿಭಟನೆ ಮಾಡುತ್ತಿವೆ. ಸರ್ವಸಂಘ ಪರಿತ್ಯಾಗಿಗಳಾದ ಧಾರ್ಮಿಕ ಸಂತರಿಗೆ ಅಪಮಾನ ಮಾಡುವ ಕೆಲಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ