ಸಂಶೋಧನೆಗಳಿಗೆ ಹೊಸ ಸ್ವರೂಪ ನೀಡುತ್ತಿರುವ ಡಾ. ಜೆ.ಎಂ. ನಾಗಯ್ಯ

(ದಿನಾಂಕ  ೨೮ ರಂದು (ರವಿವಾರ ೨೮-೦೨-೨೦೨೧) ಮುಂಜಾನೆ  ೧೦:೩೦ಕ್ಕೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಡಾ. ಜೆ.ಎಂ. ನಾಗಯ್ಯ ದತ್ತಿ ಮತ್ತು ಟ್ರಸ್ಟ ಉದ್ಘಾಟನೆಯಾಗಲಿದ್ದು, ಈ ನಿಮಿತ್ತ ಲೇಖನ)

೬೪ ವಯಸ್ಸಿನ ಸಂಭ್ರಮದಲ್ಲಿರುವ (ಜನನ: ೧.೦೭.೧೯೫೭) ನಾಗಯ್ಯ ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದವರು.  ೧೯೭೮ ರಲ್ಲಿ ಬಿ.ಎ. ಪದವಿಯನ್ನು ಹೊಸಪೇಟೆಯ ವಿಜಯನಗರ ಕಾಲೇಜಿನಿಂದ ಪಡೆದ ಶ್ರೀಯುತರು, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಪದವಿಯನ್ನು ೧೯೮೦ರಲ್ಲಿ ಪಡೆದಿದ್ದಾರೆ.  ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಬಂಗಾರ ಪದಕ ಪಡೆದ ಇವರು ಎಪ್ರಿಗ್ರಾಫಿಯಾ ಮತ್ತು  ಅನುವಾದ ಕಲೆಯಲ್ಲಿ ಡಿಪ್ಲೊಮೊ ಪದವಿಗಳನ್ನು ಪಡೆದಿದ್ದಾರೆ.  ಖ್ಯಾತ ಸಂಶೋಧಕರಾದ ಡಾ.ಎಂ.ಎಂ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಆರನೇಯ ವಿಕ್ರಮಾದಿತ್ಯನ ಶಾಸನಗಳು: ಒಂದು ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ.

ಖ್ಯಾತ ಸಂಶೋಧಕರಾದ ಡಾ.ಎಂ.ಎಂ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಆರನೇಯ ವಿಕ್ರಮಾದಿತ್ಯನ ಶಾಸನಗಳು: ಒಂದು ಅಧ್ಯಯನ ವಿಷಯದಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ  ವಿಜ್ಞಾನ ವಿಭಾಗದಲ್ಲಿ ೧೯೮೩ರ ವರೆಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಆರಂಬಿಸಿದ ಶ್ರೀಯುತರು  ಇವರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಬಳ್ಳಾರಿಯಲ್ಲಿ ಸಹಾಯಕ ಗ್ರಂಥಪಾಲಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಬೆಳಗಾವಿಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ೨೦೦೫ ರಿಂದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರವಾಚಕರಾಗಿ, ಸಹಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಜೂನ ೨೯ ೨೦೧೯ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕರಾಗಿ, ಶ್ರೀ ಬಸವೇಶ್ವರ ಪೀಠ ಮತ್ತು ಇತರ ಪೀಠಗಳ ಸಂಯೋಜಕರಾಗಿ  ರಚನಾತ್ಮವಾಗಿ ಕಾರ್‍ಯ ನಿರ್ವಹಿಸಿ, ಬಳ್ಳಾರಿ ಕೃಷ್ಣದೇವರಾಯ ಮತ್ತು ದಾವಣಗೇರಿ ವಿಶ್ವವಿದ್ಯಾಲಯಗಳ ಕನ್ನಡ ವಿಷಯದ ಬೋರ್ಡ ಆಫ್ ಸ್ಟಡೀಸ್‌ ಮತ್ತು ಬೋರ್ಡ ಆಫ್ ಎಕ್ಸಾಮಿನೇಶನ್  ಅಧ್ಯಕ್ಷರಾಗಿ ಕಾರ್‍ಯನಿರ್ವಹಿಸಿದ್ದಾರೆ.

ಸಂದರ್ಭ ಸಾಹಿತ್ಯ. ‘ಬಳ್ಳಾರಿ ಜಿಲ್ಲೆಯ ಶಾಸನಗಳು’, ಆರನೆಯ ವಿಕ್ರಮಾದಿತ್ಯನ ಶಾಸನಗಳು’ ಕಲಕೇರಿ, ಸಮಗ್ರ ಸಂಶೋಧಕ, ಡಾ.ಎಂ.ಎಂ. ಕಲಬುರ್ಗಿ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ’ ಶಿಲ್ಪಗಳಲ್ಲಿ ಶಿವಶರಣರು, ಗುರು ಬ್ರಹ್ಮಯ್ಯ, ಫ.ಗು. ಹಳಕಟ್ಟಿಯವರ ಸಮಗ್ರ ಸಾಹಿತ್ಯ ಸಂಪುಟ, ಸಾಂಪಥ ಕಾಯಕದರ್ಶಿ, ಮಹಾಮರಣ, ಕಲ್ಯಾಣ ಚಾಲುಕ್ಯರ ಶಾಸನಗಳು, ನ್ಯಾಯ ನಿಷ್ಠುರಿ, ಸಾಂಪಥ್ಯ ಸಂಪುಟ-೨, ಪ್ರಾಚೀನ ಕರ್ನಾಟಕದ ಜೀವನ ಮೌಲ್ಯಗಳು, ಪ್ರಾಚೀನ ಶಾಸನ  ಮತ್ತು ಸಾಹಿತ್ಯ ಮುಂತಾದ ಗ್ರಂಥಗಳು ಪ್ರಕಟವಾಗಿವೆ.ಸಂಶೋಧನೆ ಕುರಿತಾದ ೬೦ಕ್ಕೂ ಹೆಚ್ಚಿನ ಲೇಖನಗಳು ವಿವಿಧ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.  ಶಿಲ್ಪಗಳಲ್ಲಿ ಶಿವಶರಣರು ಕಿರಿಯ ಮತ್ತು ಆತ್ಮ ಬಲಿದಾನ ಪರಂಪರೆ ಸಮಗ್ರ ಅಧ್ಯಯನ ಹಿರಿಯ ಸಂಶೋಧನಾ ಪ್ರಾಜೆಕ್ಟಗಳನ್ನು ಮುಗಿಸಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ ವಿಚಾರ ಸಂಕಿರಣಗಳಲ್ಲಿ, ಕಮ್ಮಟಗಳಲ್ಲಿ ಸಂಶೋಧನಾತ್ಮಕ ಹೆಚ್ಚಿನ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಡಾ.ನಾಗಯ್ಯ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಸ.ಸ. ಮಾಳವಾಡ, ಸಂಶೋಧನಾ ಕ್ಷೇತ್ರಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ  ಡಾ. ಬಾರಾ ಗೋಪಾಲ ಶಾಸನ  ಮುಂತಾದ ಪ್ರಶಸ್ತಿಗಳು ಸಂದಿವೆ. ಅವರಿಗೆ ಗುಣಗ್ರಾಹಿ ಬೃಹತ್ ಅಭಿನಂದನಾ ಗ್ರಂಥ ಅರ್ಪಣೆಯಾಗಿದೆ.

ಡಾ.ಎ.ಸಿ. ವಾಲಿ, ಡಾ. ವನಜಾಕ್ಷಿ ಕುಲಕರ್ಣಿ, ಡಾ. ವಿಜಯ ಕಾಂಬಳೆ, ಡಾ. ಎಸ್.ಆರ್. ಹಿರೇಮಠ, ಡಾ.ಸಿ.ಎಂ. ವೀರಭದ್ರಯ್ಯ, ಡಾ. ಅಂಬಿಕಾ ನಾಯಕ,  ಆರ್.ಎಚ್. ಗಂಗಾಧರ, ಶಾಂತಪ್ಪ ಸಂಗಪ್ಪ, ಮಲ್ಲಪ್ಪ ಬಂಡಿ, ಎಸ್. ಎಸ್. ದೊಡ್ಡಮನಿ, ಉಮೇಶ ಪಾಟೀಲ, ರಹಮಾನ ಗೊರಜನಾಳ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿಯನ್ನು,  ಆರು ವಿದ್ಯಾರ್ಥಿಗಳು ಎಂ. ಫೀಲ್ ಪದವಿಯನ್ನು ಪಡೆದುಕೊಂಡಿದ್ದಾರೆ ಇನ್ನೂ ಕೆಲವು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಸಂಶೋಧನೆಗಳಿಗೆ ತೊಡಗಿಕೊಂಡಿದ್ದಾರೆ.

ಸಕಾಲದಲ್ಲಿ ಕನ್ನಡ ಶಿಕ್ಷಕರ ನೇಮಕಾತಿಯಾಗಬೇಕು, ವಿದ್ಯಾರ್ಥಿಗಳು ಮೊಬೈಲ್‌ ಮತ್ತು ಇಂಟರನೆಟ್‌ನನ್ನು ಅಧ್ಯಯನಕ್ಕೆ ಬಳಸಿಕೊಳ್ಳಬೇಕು, ಪ್ರಾಧ್ಯಾಪಕರೊಂದಿಗೆ, ನಿರಂತರ ಚರ್ಚೆ, ಸಂವಾದಗಳನ್ನು ಮಾಡಬೇಕು, ಒಳ್ಳೆಯ ಸ್ನೇಹಿತರ ಸಂಗವನ್ನು ಹೊಂದಬೇಕು, ಸಂಸ್ಕಾರಗಳನ್ನು ರೂಡಿಸಿಕೊಳ್ಳ್ಳುವ ಮೂಲಕ ಪಾಲಕರು-ಪೋಷಕರ ಜೀವನಕ್ಕೆ ಸ್ಪಂದಿಸಬೇಕೆಂದು ಎನ್ನುವ ಡಾ. ನಾಗಯ್ಯ ಅವರು, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು ವಿನಯಶಿಲತೆಯನ್ನು, ಸಹನೆ, ಸಂಹವನ, ಕೌಶಲ್ಯ ಶಿಸ್ತು, ಸಮಯಪ್ರಜ್ಞೆ ಮತ್ತು ಸಕಾರಾತ್ಮಕ ಯೋಜನೆಗಳನ್ನು ಬೆಳೆಸಿಕೊಳ್ಳಬೇಕೆನ್ನುತ್ತಾರೆ.

ಡಾ. ನಾಗಯ್ಯನವರು ಸರಳ ಜೀವಿ, ವಿದ್ವಾಂಸರು, ನಿವೃತ್ತಿಗೆ ತಕ್ಕ ವಿನಯಶೀಲತೆ, ಸದಾ ಅಧ್ಯಯನ ಶೀಲತೆ, ಸಾಹಿತ್ಯ ಕೈಂಕರ್ಯಗಳಿಂದ ನಾಡಿಗೆ ಚಿರಪರಿಚಿತರಾಗಿದ್ದಾರೆಂದು ಮುಂಡರಗಿಯ ಶ್ರೀ ಶ್ರೀ ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಸ್ವಾಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ನಾಗಯ್ಯ ಸಮಯಪ್ರಜ್ಞೆ, ಶಿಸ್ತು, ಕಷ್ಟಸಹಿಷ್ಟುತೆ, ಕರ್ತವ್ಯಶಕ್ತಿ, ಕಾರ್ಯವಿಧಾನಗಳ ಬಗೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಅವರು ಶ್ಲ್ಯಾಘಿಸಿದ್ದಾರೆ. ಡಾ. ಹಾ.ಮಾ ನಾಯಕ, ಡಾ. ವಿ.ಎಸ್. ಘಾಯಿ, ಡಾ. ಎಂ.ಎಂ. ಕಲಬುರ್ಗಿ ಮುಂತಾದವರು ನಾಗಯ್ಯ ಅವರ ಬರವಣಿಗೆ ಮತ್ತು ಸಂಶೋಧನಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಭಿವೃದ್ಧಿ, ಹಳಗನ್ನಡ ತರಬೇತಿ ಶಿಬಿರಗಳನ್ನು, ಶಾಸ್ತ್ರ ಸಾಹಿತ್ಯದ ಬಗೆಗೆ ವಿದ್ಯಾರ್ಥಿಗಳಲ್ಲಿ ಒಲುವ ಮೂಡಿಸುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಟ್ರಸ್ಟ ಮೂಲಕ  ಮುಂಬರುವ ದಿನಗಳಲ್ಲಿ ಆಯೋಜಿಸಲಾಗುವದು ಎನ್ನುತ್ತಾರೆ ಅವರ ಶಿಷ್ಯಂದಿರು ಮತ್ತು ಟ್ರಸ್ಟ ಪದಾಧಿಕಾರಿಗಳಾದ ಡಾ. ಕಲ್ಲಯ್ಯ ಹಿರೇಮಠ, ಡಾ. ಎಸ್.ಎಸ್. ದೊಡ್ಡಮನಿ, ಡಾ. ಬಿ.ಆರ್. ಹುಣಶ್ಯಾಳ ಅವರು. ಟ್ರಸ್ಟ ರಚನೆಯ ಬಗೆಗೆ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್. ಕೌಜಲಗಿ ಅವರು ಇದೊಂದು ಒಳ್ಳೆಯ ಬೆಳವಣಿಗೆಗೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನೆಲೆಸಿರುವ ನಾಗಯ್ಯ ಅವರು ಅಧ್ಯಯನ, ಅಧ್ಯಾಪನ, ಸಂಶೋಧನಾ ಪ್ರಕಟಣಾ ಕಾರ್ಯಗಳಲ್ಲಿ ತೊಡಗಿ ಕೊಂಡಿದ್ದು, ಕಲ್ಯಾಣ ಚಾಲುಕ್ಯರ ಶಾಸನಗಳ ಸಂಪುಟ-೨, ನಂತರದ ಸಂಪುಟಗಳಲ್ಲಿ ಸಿದ್ದಪಡಿಸುವ ಕಾರ್ಯಗಳೊಂದಿಗೆ ಮುನ್ನಡೆಯುತ್ತಿದ್ದಾರೆ.

-ಬಿ.ಎಸ್. ಮಾಳವಾಡ, ನಿವೃತ್ತ  ಗ್ರಂಥಪಾಲಕರು

 

 

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement