ಟ್ರ್ಯಾಕ್ಟರ್‌ ಸಜ್ಜಾಗಿಟ್ಟುಕೊಳ್ಳಿ: ರೈತರಿಗೆ ಕರೆನೀಡಿದ ರಾಕೇಶ್‌ ಟಿಕಾಯತ್‌

ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ರದ್ಧತಿಗೆ ಪ್ರತಿಭಟನೆ ಮುಂದುವರೆದಿರುವಂತೆಯೇ, ಯಾವುದೇ ವೇಳೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಟ್ರ್ಯಾಕ್ಟರ್‌ಗಳನ್ನು ಸಜ್ಜಾಗಿ ಇಟ್ಟುಕೊಳ್ಳುವಂತೆ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ರೈತರಿಗೆ ಕರೆನೀಡಿದ್ದಾರೆ.
ಶಾಮ್ಲಿಯಲ್ಲಿ ಮಾತನಾಡಿದ ಅವರು, ರೈತರು ತಮ್ಮ ಹೊಲಗಳಲ್ಲಿ ಕೆಲಸವನ್ನು ಮುಂದುವರೆಸಬೇಕು, ಯಾವುದೇ ಸಂದರ್ಭದಲ್ಲಿ ದೆಹಲಿಗೆ ತೆರಳುವ ಸಾಧ್ಯತೆಯಿರುವುದರಿಂದ ಅವರು ತಮ್ಮ ಟ್ರ್ಯಾಕ್ಟರ್‌ಗಳಿಗೆ ಇಂಧನ ತುಂಬಿಸಿ ಸಜ್ಜಾಗಿಡುವಂತೆ ಸೂಚಿಸಿದರು.
ರೈತರ ಒಪ್ಪಿಗೆ ಇಲ್ಲದೆ ಕೇಂದ್ರ ಸರ್ಕಾರ ಹೊಸ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದ ಅವರು, ಸರ್ಕಾರ ಆ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ದೇಶಾದ್ಯಂತ ಮಹಾ ಪಂಚಾಯತ್ ನಡೆಸಬೇಕಾದ ಅಗತ್ಯವಿದೆ. ಏಕೆಂದರೆ ಇದು ಇಡೀ ದೇಶಕ್ಕೆ ತೊಂದರೆಯಾಗಿದೆ. ಈ ಪಂಚಾಯತ್ ಹೊರಗಡೆಯೂ ಧರಣಿಯನ್ನು ಮುಂದುವರೆಸಲಾಗುವುದು. ಮಾರ್ಚ್ 24ರವರೆಗೂ ದೇಶಾದ್ಯಂತ ಪ್ರವಾಸ ಕೈಗೊಳ್ಳಲು ಯೋಜಿಸಲಾಗಿದೆ ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement