ಲಗ್ನಪತ್ರಿಕೆಯಲ್ಲಿ ಕೃಷಿ ಮಾಹಿತಿ: ಸಮಗ್ರ ಕೃಷಿ ಉತ್ತೇಜನಕ್ಕೆ ಮುಂದಾದ ಯುವ ರೈತ

ರಾಮನಗರ: ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸಮಗ್ರ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ಪ್ರಕಟಿಸಿದ ಕನಕಪುರದ ಯುವ ರೈತರೊಬ್ಬರು ಕೃಷಿಕರ ಚಿತ್ತ ಸೆಳೆದಿದ್ದಾರೆ.
ತಾಲೂಕಿನ ಗೊಲ್ಲಹಳ್ಳಿ ಸಮೀಪದ ತೆರಿಗೆದೊಡ್ಡಿಯ ಅರ್ಜುನ ನಾಯಕ್‌ ಅವರ ಮದುವೆ ಗಂಗಾಬಾಯಿ ಅವರೊಂದಿಗೆ ಮಾರ್ಚ್‌ ೭ರಂದು ಜರುಗಲಿದೆ. ತಮ್ಮ ಲಗ್ನ ಪತ್ರಿಕೆಯಲ್ಲಿ ಒಂದು ಪುಟವನ್ನು ಕೃಷಿ ಪದ್ಧತಿಗಳು ಅವುಗಳ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸಮಗ್ರ ಕೃಷಿ ಪದ್ಧತಿಯತ್ತ ರೈತರ ಆಸಕ್ತಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ.
ಕೃಷಿ ಕುಟುಂಬದ ಅರ್ಜುನ್‌ ನಾಯಕ್‌ ಕೆಲ ವರ್ಷಗಳ ಕಾಲ ಬೆಂಗಳೂರಿನ ಕೆಲವು ಕಂಪನಿಗಳಲ್ಲಿ ಉದ್ಯೋಗ ಮಾಡಿದರು. ಆದರೆ ನಂತರ ಸಮಗ್ರ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ನಂತರ ಅವರು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಸಮಗ್ರ ಕೃಷಿ ಅವಲಂಬನೆಯಿಂದ ಲಾಭದಾಯಕವಾಗಿ ಮುನ್ನಡೆಯಬಹುದೆಂಬ ವಿಶ್ವಾಸ ಮೂಡಿದ ನಂತರ ಸಮಗ್ರ ಕೃಷಿಗೆ ಮುಂದಾದರು.
ತಮ್ಮ ೩ ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ರೇಷ್ಮೆ ಜೊತೆಗೆ ತೆಂಗು ಹಾಗೂ ಅರಣ್ಯ ಕೃಷಿ ಮಾಡಿದ್ದಾರೆ. ಮೇಕೆ ಫಾರಂ ಮಾಡುವ ಸಲುವಾಗಿ ೧೦ ಮೇಕೆ ಸಾಕಿದ್ದಾರೆ. ಇದಲ್ಲದೇ ಅಣಬೆ ಕೃಷಿ ಮಾಡುವ ಉದ್ದೇಶವೂ ಅರ್ಜುನ್‌ ಅವರಿಗಿದೆ. ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯಾನ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದು, ಇದರೊಂದಿಗೆ ಜಮೀನಿನ ಕೆಲಸವನ್ನೂ ಮಾಡುತ್ತಿದ್ದಾರೆ. ಸಮಗ್ರ ಕೃಷಿಯಿಂದ ನಿರೀಕ್ಷಿತ ಪ್ರಮಾಣದ ಆದಾಯ ಬರಲಾರಂಭಿಸಿದ ನಂತರ ಉದ್ಯೋಗ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳುವುದು ಅರ್ಜುನ್‌ ಉದ್ದೇಶ.
ಮದುವೆ ಪತ್ರಿಕೆಯಲ್ಲಿ ಸಮಗ್ರ ಕೃಷಿ ಬಗ್ಗೆ ಮಾಹಿತಿ ಮುದ್ರಿಸಿದ್ದಕ್ಕೆ ಕುಟುಂಬದ ಸದಸ್ಯರು ಕೂಡ ಖುಷಿಯಾಗಿದ್ದಾರೆ. ಅವರ ಸ್ನೇಹಿತರು, ಹಿತೈಷಿಗಳು ಅರ್ಜುನ್‌ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement