ಕಾಂಗ್ರೆಸ್‌ನ ಜನಧ್ವನಿ ಯಾತ್ರೆ ಆರಂಭ, ೧೦೦ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪೂರ್ವಭಾವಿಯಾಗಿ ಬುಧವಾರದಿಂದ ಜನಧ್ವನಿ ಯಾತ್ರೆಗೆ ಚಾಲನೆ ನೀಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ದೇವನಹಳ್ಳಿಯಲ್ಲಿ ಜನಧ್ವನಿ ಯಾತ್ರೆ ಆರಂಭಗೊಂಡಿದ್ದು, ಬೆಳಿಗ್ಗೆ ಕೆಪಿಸಿಸಿ ಕಚೇರಿ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲಿಂ ಅಹಮ್ಮದ್, ಈಶ್ವರ್‍ಖಂಡ್ರೆ, ಧ್ರುವ ನಾರಾಯಣ್, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ನಾಯಕರು ಬಸ್‍ಗೆ ಪೂಜೆ ಸಲ್ಲಿಸುವ ಮೂಲಕ ಜನಧ್ವನಿ ಯಾತ್ರೆಗೆ ಚಾಲನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಸಿರು ಶಾಲು ತೊಟ್ಟು, ನೇಗಿಲು ಹಿಡಿದು ಆಗಮಿಸಿ ಯಾತ್ರೆ ಪ್ರಮುಖವಾಗಿ ರೈತರನ್ನು ಕೇಂದ್ರೀಕರಿಸಲಿದೆ ಎಂಬ ಸಂದೇಶ ನೀಡಿದರು. ತಾವು ಹೊತ್ತು ತಂದ ನೇಗಿಲನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಹಸ್ತಾಂತರಿಸಿದರು.
ಯಾತ್ರೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಬಸ್ ಮೇಲೆ ನಿಂತು ಇಬ್ಬರು ನಾಯಕರು ಜನಧ್ವನಿಗೆ ಚಾಲನೆ ನೀಡಿದರು. ನಂತರ ಎಲ್ಲಾ ನಾಯಕರು ಅದೇ ಬಸ್‍ನಲ್ಲಿ ದೇವನಹಳ್ಳಿಗೆ ಪ್ರಯಾಣ ಬೆಳೆಸಿದರು. ಜನಧ್ವನಿ ಯಾತ್ರೆ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ಬುಧವಾರ ನಡೆಯಿತು.
ಮೊದಲ ಹಂತದಲ್ಲಿ ರಾಜ್ಯಾದ್ಯಂತ 100 ವಿಧಾನಸಭಾ ಕ್ಷೇತ್ರಗಳಲ್ಲಿ ಜನಧ್ವನಿ ಯಾತ್ರೆ ನಡೆಯಲಿದ್ದು, ಒಂದು ತಿಂಗಳಿನಿಂದಲೂ ಪೂರ್ವ ತಯಾರಿ ಮಾಡಲಾಗಿದೆ. ರಾಜ್ಯಮಟ್ಟದ ಸಮಸ್ಯೆಗಳ ಜತೆಗೆ ಸ್ಥಳೀಯ ಸಮಸ್ಯೆಗಳನ್ನೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಗುತ್ತದೆ. ಅಲ್ಲಲ್ಲಿ ಪಾದಯಾತ್ರೆಗಳ ಮೂಲಕವೂ ನಡೆಯಲಿದೆ.
ಕೆಲವೊಂದು ಕಡೆ ಬಹಿರಂಗ ಸಭೆಗಳನ್ನೂ ಕೂಡ ಆಯೋಜಿಸಲಾಗಿದೆ. ಒಟ್ಟಿನಲ್ಲಿ ವಿಧಾನಸಭೆ ಅಧಿವೇಶನಕ್ಕೂ ಮುನ್ನವೇ ಸರ್ಕಾರಕ್ಕೆ ಟಕ್ಕರ್ ನೀಡಲು ಕಾಂಗ್ರೆಸಿಗರು ಯಾತ್ರೆ ಆರಂಭಿಸಿದ್ದಾರೆ. 1999ರಲ್ಲಿ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಾಂಚಜನ್ಯ ಯಾತ್ರೆ ನಡೆಸಿದ್ದರು. ರಾಜ್ಯಾದ್ಯಂತ ನಡೆದ ಯಾತ್ರೆ ಪಕ್ಷಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿತು. ಇದೇ ನಂಬಿಕೆ ಮೇಲೆ ಡಿ.ಕೆ.ಶಿವಕುಮಾರ್ ಜನಧ್ವನಿ ಹೆಸರಿನಲ್ಲಿ ಕಾಂಗ್ರೆಸ್‌ ಯಾತ್ರೆ ಆರಂಭಿಸಿದ್ದಾರೆ.
ಮಂಗಳವಾರ ಸಂಜೆ ಖುದ್ದು ಸಿದ್ದರಾಮಯ್ಯ ಮನೆಗೆ ತೆರಳಿದ ಡಿ.ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಬುಧವಾರ ಬೆಳಿಗ್ಗೆ ಅಸಮಾಧಾನ ಮರೆತು ಸಿದ್ದರಾಮಯ್ಯ ಆಗಮಿಸಿದ್ದರು..

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement