ತಮಿಳುನಾಡು: ಮೈತ್ರಿಯಲ್ಲಿ ಬಿರುಕು, ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್‌ ರಾಜ್ಯ ಘಟಕದ ನಿರ್ಧಾರ?

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ತಿಕ್ಕಾಟ ಶುರುವಾಗಿದೆ.
ಕೆಲವೇ ಕೆಲವು ಸ್ಥಾನಗಳನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಡುವ ಮೂಲಕ ಪಕ್ಷಕ್ಕೆ ಡಿಎಂಕೆ ಅವಮಾನಿಸಿದೆ ಎಂದು ರಾಜ್ಯ ಘಟಕ ಸಿಡಿಮಿಡಿಗೊಂಡಿದೆ.
ತಮಿಳುನಾಡಿನಲ್ಲಿ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಲಾಗಿದೆ. ಶುಕ್ರವಾರದ ಸಭೆಯಲ್ಲಿ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಕೆ.ಎಸ್. ಅಳಗಿರಿ ಈ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಿಗೆ ಬೇಡಿಕೆಯಿಟ್ಟಿತ್ತು. ಆದರೆ ಡಿಎಂಕೆ ಕೇವಲ 18 ಸ್ಥಾನಗಳನ್ನು ಬಿಟ್ಟುಕೊಡುವುದಕ್ಕೆ ಸಿದ್ಧವಿದೆ. 2016ರ ಚುನಾವಣೆಯಲ್ಲಿ ಕಾಂಗ್ರೆಸ್ 4೦ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ಸಿಗೆ ಹೆಚ್ಚೆಂದರೆ ಗರಿಷ್ಠ 25 ಕ್ಷೇತ್ರಗಳನ್ನು ನೀಡುವುದಾಗಿ ಡಿಎಂಕೆ ಹೇಳುತ್ತಿದೆ.
ಡಿಎಂಕೆ ಷರತ್ತು ಒಪ್ಪಿಕೊಂಡರೆ ಕಾಂಗ್ರೆಸ್ಸಿಗೆ ಅವಮಾನ: ಡಿಎಂಕೆ ನೀಡುವ ಸೀಮಿತ ಕ್ಷೇತ್ರಗಳನ್ನು ಒಪ್ಪಿಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಅವಮಾನವಾಗುತ್ತದೆ. ಒಂದು ವೇಳೆ ಒಪ್ಪಿಕೊಂಡಿದ್ದೇ ಆದರೆ, ತಮಿಳುನಾಡಿನಲ್ಲಿ ಪಕ್ಷವನ್ನು ನಾಶಮಾಡಿದಂತೆ ಆಗುತ್ತದೆ. ಆದ್ದರಿಂದ ಇನ್ನೊಬ್ಬ ನಾಯಕನನ್ನು ಆಯ್ಕೆ ಮಾಡಿ ಡಿಎಂಕೆ ಜೊತೆ ಮಾತುಕತೆ ನಡೆಸಬೇಕೆಂದು ಟಿಪಿಸಿಸಿ ಅಧ್ಯಕ್ಷ ಕೆ.ಎಸ್ ಆಳಗಿರಿ ಕೇಂದ್ರ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ಕೋಲಾಹಲ: ಕಾಂಗ್ರೆಸ್ ಪಕ್ಷಕ್ಕೆ ಡಿಎಂಕೆ ಕಡಿಮೆ ಸ್ಥಾನ ನೀಡುತ್ತಿರುವುದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಭಾರಿ ಕೋಲಾಹಲ ಸೃಷ್ಟಿಯಾಯಿತು. ಸಭೆಯಲ್ಲಿ ಹಾಜರಿದ್ದ ಕಾರ್ಯಕರ್ತರು ಏಕಾಂಗಿಯಾಗಿ ಚುನಾವಣೆ ಎದುರಿಸುವುದೇ ಒಳಿತು ಎಂದು ಒತ್ತಾಯಿಸಿದರು. ಈ ಹಿಂದೆ ನಡೆದ ಯಾವುದೇ ಸಭೆಗಳಲ್ಲಿ ಇಂಥ ವಾತಾವರಣವನ್ನು ನಾನು ಕಂಡಿರಲಿಲ್ಲ” ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ : ಶೇ.95.6 ಅಂಕ ಗಳಿಸಿ ಅದ್ಭುತ ಸಾಧನೆ ಮಾಡಿದ ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿನಿ..

ಮೌನಕ್ಕೆ ಶರಣಾದ ಕಾಂಗ್ರೆಸ್ ಉಸ್ತುವಾರಿ: ಇಷ್ಟೆಲ್ಲ ನಡೆಯುತ್ತಿದ್ದರೂ ಸಭೆಯಲ್ಲೇ ಕುಳಿತಿದ್ದರೂ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್, ಕಾರ್ಯಕರ್ತರು ಮತ್ತು ನಾಯಕರನ್ನು ಸಮಾಧಾನಪಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಅವರು ಮೌನವಾಗಿದ್ದರು. ಚುನಾವಣೆಯಲ್ಲಿ ರಾಜ್ಯ ಘಟಕವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಪಕ್ಷದ ರಾಷ್ಟ್ರೀಯ ನಾಯಕತ್ವದ ಅನುಮೋದನೆಗಾಗಿ ತನ್ನ ನಿರ್ಧಾರವನ್ನು ಕಳುಹಿಸಲಿದೆ ಎಂದು ಪಕ್ಷದ ಮುಖಂಡರು ಪ್ರಕಟಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement