ಕಾಂಗ್ರೆಸ್‌ ನಾಯಕರ ಕಚ್ಚಾಟಕ್ಕೆ ಸುರ್ಜೆವಾಲಾರ ಮುಲಾಮು…?

ಬೆಂಗಳೂರು: ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕರ ನಡುವೆ ಪರಸ್ಪರ ಕಿತ್ತಾಟ ಹೆಚ್ಚಾಗಿದ್ದು,ಅದು ಈಗ ತಾರಕಕ್ಕೂ ಹೋಗಿದೆ.
ಹೊಂದಾಣಿಕೆಯ ಕೊರತೆಯಿಂದಾಗಿ ಗುಂಪುಗಾರಿಕೆಯೂ ಹೆಚ್ಚಾದಂತೆ ಕಂಡುಬರುತ್ತಿದೆ. ಮೈಸೂರು ಮೇಯರ್‌ ಆಯ್ಕೆ ಗೊಂದಲದ ನಂತರ ಕಾಂಗ್ರೆಸ್‌ನ ಆಂತರಿಕ ಕಿತ್ತಾಟ, ಗುಂಪುಗಾರಿಕೆಯ ವಿಷಯ ದೆಹಲಿಯ ಕಾಂಗ್ರೆಸ್‌ನ ಹೈಕಮಾಂಡ್‌ ಅಂಗಳದ ವರೆಗೂ ಹೋಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ  ಮುಂದಿನ ವಾರ ಬೆಂಗಳೂರಿಗೆ ಬಂದು ಈಗ ನಾಯಕರ ಮಧ್ಯೆ ಹೊಂದಾಣಿಕೆ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ತಮ್ಮ ಮಾತನ್ನು ಕಡೆಗಣಿಸಿದ ಕಾರಣಕ್ಕೆ ಸಿಟ್ಟಾಗಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾಗ ಹೈಕಮಾಂಡ್‍ಗೆ ದೂರು ನೀಡಿ ಬಂದಿದ್ದರು. ವಾಸ್ತವಾಂಶ ತಿಳಿದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ್ ಅವರನ್ನು ಕಳುಹಿಸಿತ್ತು.
ಅವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ ಹೈಕಮಾಂಡ್‍ಗೆ ವರದಿ ನೀಡಿದ್ದು, ಅದರಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆಯ ಕೊರತೆ ಇರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಈ ವರದಿ ನೀಡುವ ಮುನ್ನವೇ ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರ ಗುಂಪುಗಾರಿಕೆ, ಭಿನ್ನಮತ ಬಹಿರಂಗವಾಗಿತ್ತು. ಮೈಸೂರು ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಸಿಕ್ಕಿರಲಿಲ್ಲ. ಅದರ ಬೆನ್ನಲ್ಲೇ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಪ್ರತಿಭಟನೆಯಿಂದ ಸಿದ್ದರಾಮಯ್ಯ ದೂರ ಉಳಿದು ತಮ್ಮ ಅಸಮಾಧಾನ ಹೊರಹಾಕಿದ್ದರು.

ಅಷ್ಟೇ ಏಕೆ ಕೆಪಿಸಿಸಿ ಹಮ್ಮಿಕೊಂಡಿದ್ದ ಜನಧ್ವನಿ ಕಾರ್ಯಕ್ರಮದಿಂದಲೂ ದೂರ ಉಳಿಯಲು ಸಿದ್ದರಾಮಯ್ಯ ಮುಂದಾಗುವಷ್ಟರ ಮಟ್ಟಿಗೆ ಮೈಸೂರು ಮೇಯರ್‌ ಆಯ್ಕೆ ವಿದ್ಯಮಾನ ಕಾಂಗ್ರೆಸ್‌ನಲ್ಲಿ ಭಾರೀ ಕೋಲಾಹಲ ಸೃಷಿಸಿತ್ತು. ಮಾಜಿ ಸಚಿವ ತನ್ವೀರ್‌ ಸೇಠ್‌ ಅವರಿಗೆ ನೋಟಿಸ್‌ ನೀಡಲಾಯಿತು. ಪರಿಸ್ಥಿತಿ ಅರಿತ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಮನವೊಲಿಸಿ ಬಂದಿದ್ದರು.
ಈಗಲೂ ಮೇಲ್ನೋಟಕ್ಕೆ ಎಲ್ಲವೂ ಸರಿ ಹೋಗಿದೆ ಎನಿಸಿದ್ದರೂ, ಒಳಗೊಳಗೆ ಗುಂಪುಗಾರಿಕೆ ಜೋರಾಗಿಯೇ ಇದೆ. ಮಧುಯಕ್ಷಿಗೌಡ್ ಅವರ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ರಣದೀಪ್ ಸುರ್ಜೇವಾಲ ಮುಂದಿನ ವಾರ ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಎಲ್ಲಾ ನಾಯಕರ ನಡುವೆ ಸಂಧಾನ ಮಾತುಕತೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.ಆದರೆ ಅವರು ಬಿರುಕು ಬಿಟ್ಟಿರುವ ಕಾಂಗ್ರೆಸ್‌ ನಾಯಕರ ಮಧ್ಯೆ ಮುಲಾಮು ಹಚ್ಚಿ ಸರಿಪಡಿಸುವರೇ?

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement