ಬೆಂಗಳೂರು: ರಮೇಶ ಜಾರಕಿಹೊಳಿಗೆ ಸಂಬಂಧಿಸದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ.
ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ದಿನೇಶ ಕಲ್ಹಳ್ಳಿ ಅವರ ವಕೀಲರನ್ನು ಉಲ್ಲೇಖಿಸಿ ಅವರು ದೂರನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಈ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ದಿನೇಶ ಅವರೇ ಸ್ಪಷ್ಟನೆ ನೀಡಬೇಕಿದೆ.
ದಿನೇಶ ಕಲ್ಹಳ್ಳಿ ದೂರು ಹಿಂಪಡೆಯುತ್ತಿರುವುದಾಗಿ ತಮ್ಮ ವಕೀಲರಿಗೆ ಪತ್ರ ರವಾನಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಅವರ ವಕೀಲರು ದೂರು ವಾಪಸ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ದೂರಿನಲ್ಲಿ ತಾಂತ್ರಿಕ ದೋಷ ಇದ್ದಿದ್ದರಿಂದ ದೂರನ್ನು ವಾಪಸ್ ಪಡೆಯಲಾಗಿದೆ. ಈ ಬಗ್ಗೆ ದಿನೇಶ್ ಅವರೇ ಮಾಧ್ಯಮಗಳಿಗೆ ಸ್ಪಷ್ಟನೆ ಕೊಡಲಿದ್ದಾರೆ ಎಂದು ದಿನೇಶ ಅವರ ವಕೀಲರು ತಿಳಿಸಿದ್ದಾರೆ ಎಂದೂ ಕೆಲ ಮಾಧ್ಯಮಗಳು ವರದಿ ಮಾಡಿವೆ.
ನಾಲು ದಿನಗಳ ಹಿಂದೆ ನೌಕರಿ ಕೊಡಿಸುವುದಾಗಿ ಯುವತಿಯೊಬ್ಬಳನ್ನು ನಂಬಿಸಿ, ಅವಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ. ಮತ್ತು ಯುವತಿ ಮತ್ತು ಅವಳ ಕುಟುಂಬದವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಸಚಿವರ ವಿರುದ್ಧ ದೂರು ದಾಖಲಿಸಿದ್ದರು.ಅಶ್ಲೀಲ ವಿಡಿಯೋ ಸಹ ಬಿಡುಗಡೆ ಮಾಡಿದ್ದರು. ಇದರಿಂದ ಸಚಿವರು ರಾಜೀನಾಮೆ ನೀಡಬೇಕಾಯಿತು. ಅವರು ದೂರು ಹಿಂಪಡೆದಿದ್ದು ಹೌದಾದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ತಮ್ಮ ನಿಲುವನ್ನು ಯಾಕೆ ಬದಲಾಯಿಸಿದರು? ಬಲಾಯಸಿದ್ದರ ಹಿನ್ನೆಲೆ ಏನು ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ದಿನೇಶ ಕಲ್ಹಳ್ಳಿ ಅವರೇ ಉತ್ತರ ನೀಡಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ