೯ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮಂಗಳವಾರ ಬೆಳ್ಳಂಬೆಳಗ್ಗೆ 9 ಅಧಿಕಾರಿಗಳಿಗೆ ಸೇರಿದ ರಾಜ್ಯದ 11 ಜಿಲ್ಲೆಗಳ 28 ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಅಕ್ರಮವಾಗಿ ಸಂಪತ್ತು ಗಳಿಸಿದ ಆರೋಪಗಳು ಈ ಓಂಭತ್ತು ಅಧಿಕಾರಿಗಳ ವಿರುದ್ಧ ಕೇಳಿಬಂದ ಹಿನ್ನೆಲೆಯಲ್ಲಿ ಇವರ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಯಾದಗಿರಿಯಲ್ಲಿ ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ಜೆಸ್ಕಾಮ್ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದ್ದು, ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ಹಣ, ಚಿನ್ನ ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಮಂಡ್ಯದ ಆರ್.ಟಿ.ಒ. ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಎ.ವಿ. ಚೆನ್ನವೀರಪ್ಪ ಎಂಬವರ ಮನೆ ಮೇಲೆ ಸಹ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯದ ಕುವೆಂಪು ನಗರದ ಮನೆ, ತಾಲೂಕಿನ ಅಲಕೆರೆಯಲ್ಲಿನ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದ್ದು, ಈ ವೇಳೆ ಮಹತ್ವದ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಚಿಕ್ಕಬಳ್ಳಾಪುರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರಿಗೆ ಸೇರಿದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಮನೆ, ಕಚೇರಿ, ಅವರ ಸಹೋದರನ ಕೋಲಾರದ ಮನೆಯ ಮೇಲೆ ಕೇಂದ್ರ ವಲಯದ ಪೊಲೀಸ್ ವರಿಷ್ಠಾಧಿಕಾರಿ ಕಲಾ ಕೃಷ್ಣಮೂರ್ತಿಯವರ ತಂಡ ದಾಳಿ ನಡೆಸಿದೆ.
ಎಸಿಬಿ ದಾಳಿ ನಡೆಸಿದ ಅಧಿಕಾರಿಗಳ ವಿವರ: ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆಗಳ ಕಿರಿಯ ಎಂಜಿನಿಯರ್ ಕೆ.ಸುಬ್ರಮಣ್ಯಂ, ದಾವಣಗೆರೆ ವಿಭಾಗದ ಫ್ಯಾಕ್ಟರೀಸ್ ಮತ್ತು ಬಾಯ್ಲರ್‌ನ ಉಪನಿರ್ದೇಶಕ ಕೆ.ಎಂ. ಪ್ರಥಮ್, ಮೈಸೂರು ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ.ಯಾದವ್, ಮೈಸೂರಿನ ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮುನಿಗೋಪಾಲ ರಾಜ್,
ಮೈಸೂರು ದಕ್ಷಿಣ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ, ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಹನುಮಂತ ಶಿವಪ್ಪ ಚಿಕ್ಕಣ್ಣ, ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ
ಯಾದಗಿರಿಯ ಜೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ್ ಹಾಗೂ ಬಿಎಂಎಫ್‌ಟಿ ಪೊಲೀಸ್ ಇನ್‌ಸ್ಪೆಕ್ಟರ್ ವಿಕ್ಟರ್ ಸಿಮೊನ್ಅವರ ಮೆನಗಳ ಮೇಲೆ ಎಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement