“ಇತನಾ ಗುಸ್ಸಾ ಕ್ಯೋಂ, ದೀದಿ?: ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಹಾಡು

ಚಿತ್ರ ಕೃಪೆ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌

ಇತನಾ ಗುಸ್ಸಾ ಕ್ಯೋಂ, ದೀದಿ?(ಇಷ್ಟೊಂದು ಕೋಪ ಏಕೆ, ದೀದಿ), ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಹೊಸ ಪ್ರಚಾರದ ಜಾಹೀರಾತು. ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮನ್ನು ‘ರಾವಣ’, ‘ರಾಕ್ಷಸ’, ದೈತ್ಯ ಮತ್ತು ‘ಗೂಂಡಾ’ ಎಂದು ಕರೆದಿದ್ದಕ್ಕೆ ಕೊಲ್ಕತ್ತಾದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಇತನಾ ಗುಸ್ಸಾ ಕ್ಯೋಂ ದೀದಿ (ಇಷ್ಟೊಂದು ಕೋಪ ಯಾಕೆ ದೀದಿ) ಎಂದು ಅಪಹಾಸ್ಯ ಮಾಡಿದ್ದರು. ಈಗ ಅದೇ ಸಂಭಾಷಣೆಯನ್ನೊಳಗೊಂಡ ಹಾಡನ್ನು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಮತದಾರರನ್ನು ಮುಟ್ಟಲು ಬಿಜೆಪಿಯು ತನ್ನ ಪ್ರಚಾರದ ಹಾಡನ್ನಾಗಿ ಮಾಡಿಕೊಂಡಿದೆ.
ಬಿಜೆಪಿಯು ಸೋಮವಾರ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ಗೆ ಅದೇ ಶೀರ್ಷಿಕೆಯೊಂದಿಗೆ ಈ ಹಾಡನ್ನು ಹಂಚಿಕೊಳ್ಳುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಪಹಾಸ್ಯ ಮಾಡಿದೆ.
“ಕೋಪಗೊಳ್ಳಬೇಡಿ, ಸ್ವಲ್ಪ ಕೆಲಸ ಮಾಡಿ, ಸೇಡಿನ (ಬದ್ಲಾ) ಬಗ್ಗೆ ಮಾತನಾಡಬೇಡಿ, ಬದಲಾವಣೆಯ ಬಗ್ಗೆ ಮಾತನಾಡಿ. (ಪೊರಿಬೋರ್ತನ್). ನಮಗೆ ಹೊಸ ಯುಗ ಬೇಕು, ದೀದಿ, ಕೋಪಿಸಿಕೊಳ್ಳಬೇಡಿ ”ಎಂದು ಹಾಡಿನ ಸಾಹಿತ್ಯ ಹೇಳುತ್ತದೆ.
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಹಗರಣಗಳ ಬಗ್ಗೆ ಬಿಜೆಪಿ ಈ ಹಾಡು ಉಲ್ಲೇಖಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಮೇಲೆ ಮಮತಾ ಬ್ಯಾನರ್ಜಿಗಳು ವಿವಿಧ ಸಭೆ-ಸಮಾರಂಭಗಳಲ್ಲಿ ನಡೆಸಿದ ವೈಯಕ್ತಿಕ ವಾಗ್ದಾಳಿಗಳ ಸ್ಕ್ರೀನ್‌ಗ್ರಾಬ್‌ಗಳನ್ನು ಹಂಚಿಕೊಂಡ ಬಿಜೆಪಿ, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ತನ್ನ 10 ವರ್ಷಗಳ ಆಡಳಿತದ ವಿವಿಧ ಹಗರಣಗಳ ಬಗ್ಗೆ ಉಲ್ಲೇಖಿಸಿದೆ. ಟಿಎಂಸಿ ಸರ್ಕಾರದ ಶಾರದಾ ಚಿಟ್‌ ಫಂಡ್‌ ಇತ್ಯಾದಿ ಹಗರಣದ ಬಗ್ಗೆ ಉಲ್ಲೇಖಿಸಲಾಗಿದೆ. ಮಮತಾ ಸರ್ಕಾರ ಯಾವುದೇ ‘ಪರಿವರ್ತನ’ (ಬದಲಾವಣೆ) ಹೇಗೆ ತಂದಿಲ್ಲ ಎಂಬುದರ ಬಗ್ಗೆಯೂ ಹಾಡಿನಲ್ಲಿ ಹೇಳಲಾಗಿದೆ.
ಅಲ್ಲದೆ ಸಿಎಎ, ಎನ್‌ಆರ್‌ಸಿ ಮತ್ತು ಕೊವಿಡ್‌ -19 ಲಸಿಕೆ ಬಗ್ಗೆ ಮಮತಾ ಬ್ಯಾನರ್ಜಿ ಭಯಭೀತರಾಗಿದ್ದರ ಬಗ್ಗೆಯೂ ಈ ಹಾಡು ಹೇಳುತ್ತದೆ. ಪಶ್ಚಿಮ ಬಂಗಾಳದಲ್ಲಿ ಹೊಸ ಬದಲಾವಣೆ, ಹೊಸ ಸರ್ಕಾರ ಮತ್ತು ಹೊಸ ನಾಳೆಯ ಬಗ್ಗೆ ಹೇಳುವ ಪ್ರಧಾನಿ ಮೋದಿ, ಮಮತಾ ತನಗೆ ರಾವಣ ಎಂದು ಕರೆದಿದ್ದಕ್ಕೆ ಇತನಾ ಗುಸ್ಸಾ ಕ್ಯೋಂ ದೀದಿ ಎಂದು ಕೇಳಿದ ಹಾಡು ಈಗ ಬಿಜೆಪಿಯ ಚುನಾವಣಾ ಸರಕಾಗಿದೆ.
ಭಾನುವಾರ, ಪ್ರಧಾನಿ ಮೋದಿ ಕೊಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಅಪಹಾಸ್ಯ ಮಾಡಲು ಬಳಸಿದ ಪದಗಳನ್ನೇ ಹಾಡಿನಲ್ಲಿ ಬಳಸಿದ್ದಾರೆ. “ಹಿಂದಿನ ದೀದಿ ಬಗ್ಗೆ ನನಗೆ ಗೊತ್ತಿತ್ತು. ಆದರೆ ಈಗ ಅವರು ನನಗೆ ಗೊತ್ತಿದ್ದ ದೀದಿ ಅಲ್ಲ, ಅವರ ರಿಮೋಟ್ ಕಂಟ್ರೋಲ್ ಬೇರೊಬ್ಬರ ಬಳಿ ಇದೆ. ಅವರು ಬಂಗಾಳದ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ ”ಎಂದು ಪ್ರಧಾನಿ ಮೋದಿ ಹೇಳಿದ್ದರು.
ಬಂಗಾಳಕ್ಕೆ ಶಾಂತಿ, ಸೋನಾರ್ ಬಾಂಗ್ಲಾ, ಪ್ರಗತಿಶೀಲ್ ಬಾಂಗ್ಲಾ ಅಗತ್ಯವಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಬಂಗಾಳಕ್ಕೆ ‘ಅಸೋಲ್ ಪೊರಿಬೋರ್ತನ್’ ಸಾಧಿಸುವ ಸಮಯ ಬಂದಿದೆ ಎಂದೂ ಹೇಳಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ 3-4 ದಿನ ಮಳೆ ಬೀಳುವ ಮುನ್ಸೂಚನೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement