ಹಣಕಾಸು ಇಲಾಖೆ ಅಧಿಕಾರಿಗಳೇ ಸಿಎಂ ಯಡಿಯೂರಪ್ಪಗೆ ಟೋಪಿ ಹಾಕಿದ್ದಾರೆ: ಎಚ್‌.ವಿಶ್ವನಾಥ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಏನೂ ಹೊಸತನವಿಲ್ಲ, ಹಣಕಾಸು ಇಲಾಖೆ ಅಧಿಕಾರಿಗಳೇ ಮುಖ್ಯಮಂತ್ರಿಗೆ ಟೋಪಿ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಎಚ್‌.ವಿಶ್ವನಾಥ ಹೇಳಿದರು.
ಕಳೆದ ೧೦ ವರ್ಷಗಳ ಬಜೆಟ್‌ ನೋಡಿದ್ದೇನೆ. ಇದರಲ್ಲಿ ಏನೂ ಹೊಸ ಯೋಜನೆಗಳಿಲ್ಲ. ಅಂಕಿ-ಅಂಶಗಳನ್ನು ತಿರುಗು-ಮುರುಗು ಮಾಡಿದ್ದಾರೆ. ಹಣಕಾಸು ಖಾತೆ ನಿಭಾಯಿಸಿದ ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹಲವು ಬಾರಿ ಬಜೆಟ್‌ ಮಂಡಿಸಿದ್ದಾರೆ. ಆದರೆ ಇವರು ಆರ್ಥಿಕ ತಜ್ಞರಲ್ಲ. ಆರ್ಥಿಕ ಖಾತೆಗೆ ಪ್ರತ್ಯೇಕ ಸಚಿವರ ಅವಶ್ಯಕತೆಯಿದೆ ಎಂದರು.
೪೦ ವರ್ಷಗಳ ಹಿಂದೆ ನಾನು ಸದನಕ್ಕೆ ಬಂದೆ. ಆಗ ಬಜೆಟ್‌ಗೆ ಬಹಳ ಮಹತ್ವವಿತ್ತು. ಬಜೆಟ್‌ ಮಂಡಿಸಿದ ಬಳಿಕ ವ್ಯಾಪಕ ಚರ್ಚೆ ನಡೆಯುತ್ತಿತ್ತು. ಇಲಾಖೆವಾರು ಚರ್ಚೆಯ ಬಳಿಕ ಸಚಿವರು ಉತ್ತರ ನೀಡುತ್ತಿದ್ದರು. ಆದರೆ ಈಗ ಇಂಥ ಸ್ಥಿತಿಯಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದೆ ಹಣಕಾಸು ಇಲಾಖೆಗೆ ಪ್ರತ್ಯೇಕ ಸಚಿವರಿದ್ದರು. ಆದರೆ ಈಗ ಮುಖ್ಯಮಂತ್ರಿಗಳೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಮೈತ್ರಿ ಸರಕಾರದ ಅವಧಿಯಲ್ಲಿ ಹಣಕಾಸು ಇಲಾಖೆಯನ್ನು ಬೇರೆಯವರಿಗೆ ನೀಡುವಂತೆ ಹೇಳಿದ್ದೆ. ಯಾಕೆ ನನಗೆ ಅದನ್ನು ನಿಭಾಯಿಸಲು ನನಗೆ ಸಾಮರ್ಥ್ಯವಿಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಸಮಯದ ಕೊರತೆಯಿಂದಾಗಿ ನಿಮಗೆ ಅದನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದಾಗ ಅವರು ನನ್ನ ಬಗ್ಗೆ ಸಿಟ್ಟು ಮಾಡಿಕೊಂಡರು ಎಂದರು.
ಮುಖ್ಯಮಂತ್ರಿ ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬಾರದು. ನರೇಂದ್ರ ಮೋದಿ ಗುಜರಾತ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಖಾತೆ ತಮ್ಮ ಬಳಿ ಇಟ್ಟುಕೊಂಡಿರಲಿಲ್ಲ. ಆದರೆ ಯಡಿಯೂರಪ್ಪ ಹಣಕಾಸು ಖಾತೆಯಲ್ಲದೇ ಹಲವು ಮುಖ್ಯ ಖಾತೆಗಳನ್ನು ತಮ್ಮ ಬಳಿ ಯಾಕೆ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ನಿಗಮ ಮಂಡಳಿಗಳಿಂದ ಆಂತರಿಕ ಸೃಜನೆ ಮೂಲಕ ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಕಳೆದ ಬಜೆಟ್‌ನಲ್ಲಿಯೂ ಈ ಕುರಿತು ಪ್ರಸ್ತಾಪಿಸಲಾಗಿತ್ತು. ಎಷ್ಟು ಕ್ರೂಢಿಕರಣವಾಗಿದೆ ಎಂಬುದನ್ನು ಅಧಿಕಾರಿಗಳೇ ತಿಳಿಸಬೇಕು. ಹೆಚ್ಚಿನ ನಿಗಮನಗಳು ಸರಕಾರದ ಅನುದಾನದಲ್ಲಿ ನಡೆಯುತ್ತಿವೆ. ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಾಗಿದೆ. ನಿಗಮ-ಮಂಡಳಿಗಳು ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂದರು.
ವಿಧಾನಸೌಧ ಒಂದು ಮಾಲ್‌ ಆಗಿದೆ. ಏನು ಬೇಕಾದರೂ ಮಾರಾಟ ಮಾಡಬಹುದು, ಏನು ಬೇಕಾದರೂ ಖರೀದಿ ಮಾಡಬಹುದಾಗಿದೆ. ವರ್ಗಾವಣೆ, ಟೆಂಡರ್‌ ದಲ್ಲಾಳಿಗಳೇ ತುಂಬಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.
ಮೀಸಲಾತಿ ಹೋರಾಟ ಹೆಚ್ಚಾಗಿದೆ. ಎಲ್ಲರಿಗೂ ಮೀಸಲಾತಿ ಕೊಡಿರಿ ಆದರೆ ಕೆನೆಪದರ ನೀತಿ ಜಾರಿಗೆ ತರಬೇಕು. ವಿಶ್ವನಾಥ, ಮಲ್ಲಿಕಾರ್ಜುನ ಖರ್ಗೆ, ಗೋವಿಂದ ಕಾರಜೋಳ ಅವರಿಗೂ ಮೀಸಲಾತಿ, ಅವರ ಮಕ್ಕಳಿಗೂ ಮೀಸಲಾತಿ ಎಂದರೆ ಕೊಟ್ಟರೆ ಏನು ಪ್ರಯೋಜನವಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿ ತಲುಪಬೇಕು ಎಂದು ಆಗ್ರಹಿಸಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಶಾಕ್ : ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement