ಶ್ರೀಶೈಲ: ಶಿವ ಸಂಸ್ಕೃತಿಗೆ ಮಾರು ಹೋಗಿ ಶ್ರೀಶೈಲ ಜಗದ್ಗುರು ಡಾ. ಚನ್ನ ಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರಿಂದ ಮೊಹಮ್ಮದ್ ಮಸ್ತಾನ್ ಎಂಬ ಇಸ್ಲಾಂ ಯುವಕ ಲಿಂಗ ದೀಕ್ಷೆ ಪಡೆದು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಮಾಡಿದ್ದಾನೆ.
ಮೂಲತಃ ವಿಜಯವಾಡ ನಿವಾಸಿಯಾದ ಮೊಹಮ್ಮದ, ಮುಂಬೈ ಮಹಾನಗರದಲ್ಲಿ ಹರ್ಬಲ್ ಉದ್ಯಮ ಮಾಡುತ್ತಿರುವ ಇಸ್ಲಾಂ ಧರ್ಮೀಯ. ಇವರಿಗೆ ಮೊದಲಿನಿಂದಲೂ ಶಿವ ಸಂಸ್ಕೃತಿಯ ಬಗ್ಗೆ ವಿಶೇಷ ಶ್ರದ್ಧೆ ಹೊಂದಿದವನಾಗಿದ್ದು, ಹಲವಾರು ಬಾರಿ ಶ್ರೀಶೈಲಕ್ಕೆ ಬಂದು ಹೋಗಿದ್ದಾರೆ. ಆದರೆ ಈ ಹಿಂದೆ ಬಂದಾಗಲೆಲ್ಲ ಶ್ರೀಶೈಲ ಜಗದ್ಗುರುಗಳು ಪ್ರವಾಸದಲ್ಲಿದ್ದ ಕಾರಣ ಜಗದ್ಗುರುಗಳ ದರ್ಶನವಾಗಿರಲಿಲ್ಲ. ಶಿವರಾತ್ರಿಯಂದು ಜಗದ್ಗುರುಗಳು ಪೀಠದಲ್ಲಿರುತ್ತಾರೆಂದು ತಿಳಿದು ಶಿವರಾತ್ರಿಯ ಶುಭದಿನದಂದು ಶ್ರೀಶೈಲಕ್ಕೆ ಬಂದು ಜಗದ್ಗುರುಗಳ ದರ್ಶನ ಪಡೆದು ಇಷ್ಟಲಿಂಗವನ್ನು ಪಡೆಯಬೇಕೆಂಬ ತನ್ನ ಮನೋಭಿಲಾಶೆಯನ್ನು ಅರಿಕೆ ಮಾಡಿಕೊಂಡಿದ್ದಾರೆ. ಆಗ ದೀಕ್ಷೆಯ ನಂತರ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಲು ಮೋಹಮ್ಮದ್ ಮಾನಸಿಕವಾಗಿ ಸಿದ್ಧವಾಗಿರುವುದನ್ನು ಖಾತರಿ ಪಡಿಸಿಕೊಂಡು ನಂತರ ಜಗದ್ಗುರುಗಳು ಅವರಿಗೆ ಲಿಂಗ ದೀಕ್ಷೆ ನೀಡಿದರು.
ಮೊದಲು ಪೂರ್ವಾಶ್ರಮ ನಿರಸನಗೊಳಿಸಲು ಅಗರಬತ್ತಿಯ ಮೂಲಕ ಜಿಹ್ವಾ ದಹನ, ಅಭಿಷೇಕ ಮಂತ್ರಾದಿಗಳ ಮೂಲಕ ದೇಹಶುದ್ಧಿ ಮೊದಲಾದ ವಿಧಿ ವಿಧಾನಗಳನ್ನು ನೆರವೇರಿಸಿ ನಂತರ ಲಿಂಗ ನೀಡಿ ಮಂತ್ರೋಪದೇಶ ಮಾಡಿದರು.
ಈ ಸಂಧರ್ಭದಲ್ಲಿ ಅವರಿಗೆ ಇಷ್ಟಲಿಂಗವನ್ನು ದೇಹದ ಮೇಲೆ ಸದಾ ಧರಿಸುವಂತೆ, ಪ್ರತಿನಿತ್ಯ ತಪ್ಪದೇ ಇದರ ಪೂಜೆ ನೆರವೇರಿಸುವಂತೆ , ಪೂಜೆ ಮಾಡುವಾಗ ಕನಿಷ್ಠ ೧೦೮ ಬಾರಿ ಪಂಚಾಕ್ಷರಿ ಮಂತ್ರವನ್ನು ಜಪಿಸುವಂತೆ ಮತ್ತು ಇನ್ನು ಮುಂದೆ ಎಂದೂ ಮಾಂಸಾಹಾರ ಮದ್ಯ ಸೇವನೆ ಮುಂತಾದ ದುಶ್ಚಟಗಳನ್ನು ಮಾಡದಿರುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.
ಹೀಗೆ ಲಿಂಗ ಧೀಕ್ಷೆ ಪಡೆದ ನಂತರ ಮೋಹಮ್ಮದನು ವೀರಶೈವ ಲಿಂಗಾಯತ ಧರ್ಮದ ಪಂಚಪೀಠಗಳಲ್ಲೊಂದಾದ ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ಮಹಾ ಪೀಠದ ಮತ್ತು ಮಲ್ಲಿಕಾರ್ಜುನ ಜೋತಿರ್ಲಿಂಗದ ಮತ್ತು ಭ್ರಮರಾಂಭ ದೇವಿಯ ದರ್ಶನ ಪಡೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ