ಬೆಳಗಾವಿ: ನಗರದಲ್ಲಿ ಮಾ.೩೧ರಂದು ಆಯೋಜಿಸಿರುವ ರೈಲ ಮಹಾಪಂಚಾಯತ್ ಸಮಾವೇಶಕ್ಕೆ ಯಾವುದೇ ಮೈದಾನವನ್ನೂ ಜಿಲ್ಲಾಡಳಿತ ನೀಡುತ್ತಿಲ್ಲ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡ ಸ್ವಾಮಿ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 31ರಂದು ಇಲ್ಲಿ ಆಯೋಜಿಸಿರುವ ರೈತರ ಮಹಾ ಪಂಚಾಯತಕ್ಕೆ ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಯಾವುದೇ ಮೈದಾನವನ್ನೂ ಜಿಲ್ಲಾಡಳಿತ ನೀಡುತ್ತಿಲ್ಲ ಎಂದು ಹೇಳಿದರು.
ಮೂರು ಕೃಷಿ ಕಾಯ್ದೆ ಜಾರಿ ಮಾಡಿರುವ ಕೇಂದ್ರ ಸರ್ಕಾರದ ಕೇಂದ್ರದ ರೈತ ವಿರೋಧಿ ಧೋರಣೆಯನ್ನು ಜನರ ಮುಂದೆ ತೆರೆದಿಡಲು
ಜಿಲ್ಲಾಡಳಿತದ ಅಸಹಕಾರದ ನಡುವೆಯೂ ನಾವು ಚಳವಳಿ ನಡೆಸುತ್ತೇವೆ. ಇದು ವಿಭಾಗ ಮಟ್ಟದ ಮಹಾ ಪಂಚಾಯತ್ ಆಗಿದ್ದು, ನಗರದ ರಾಣಿ ಚನ್ನಮ್ಮ ವೃತ್ತದಲ್ಲೇ ನಡೆಸುವುದು ಅನಿವಾರ್ಯವಾಗಿದೆ. ಯಾಕೆಂದರೆ ಸಮಾವೇಶದಲ್ಲಿ ಸಹಸ್ರಾರು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಶಿವಮೊಗ್ಗದಲ್ಲಿ ಮಾರ್ಚ್ 20ರಂದು ಹಾಗೂ ಹಾವೇರಿಯಲ್ಲಿ ಮಾರ್ಚ್ 21ರಂದು ಮಹಾಪಂಚಾಯತ್ ನಡೆಯಲಿದ್ದು, ಅಲ್ಲಿ ಮೈದಾನಗಳು ದೊರೆತಿವೆ. ಆದರೆ, ಇಲ್ಲಿ ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಜುಗರ ಆಗಬಾರದೆಂದು ಸರ್ಕಾರವು ಅಧಿಕಾರಿಗಳ ಮೇಲೆ ಒತ್ತಡ ತಂದು ಮೈದಾನ ಸಿಗದಂತೆ ನೋಡಿಕೊಂಡಿದೆ. ಖಾಸಗಿ ಸಂಸ್ಥೆಗಳಿಗೆ ಸೇರಿದ ಮೈದಾನವೂ ಸಿಗದಂತೆ ಮಾಡುತ್ತಿದೆ’ ಎಂದು ಆರೋಪಿಸಿದರು.
ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್ ಮೊದಲಾದವರು ಭಾಗವಹಿಸಲಿದ್ದಾರೆ. ಯೋಗೇಂದ್ರ ಯಾದವ್ ಅವರಿಗೂ ಆಹ್ವಾನ ನೀಡಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ, ಬಡಗಲಪುರ ನಾಗೇಂದ್ರ ಮೊದಲಾದವರನ್ನೂ ಕರೆದಿದ್ದೇವೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ