ರಾಜ್ಯದಲ್ಲಿ ಸಿಡಿ ತಯಾರಿಸುವ ೨ ಫ್ಯಾಕ್ಟರಿಗಳಿವೆ: ಯತ್ನಾಳ

ವಿಜಯಪುರ: ರಾಜ್ಯದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿಗಳಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಸಿಡಿ ತಯಾರಿಸುವ ಇಬ್ಬರು ನಿಷ್ಣಾತ ವ್ಯಕ್ತಿಗಳಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿಡಿ ತಯಾರಿಕೆಯಲ್ಲಿ ಪಳಗಿದ ಮುಖಂಡರು ಯಾರು ಎಂಬುದನ್ನು ಬಹಿರಂಗಗೊಳಿಸುವುದಿಲ್ಲ. ಸಿಡಿ ವಿಚಾರದಲ್ಲಿ ಕಾಂಗ್ರೆಸ್‌ ಕೈವಾಡವಿದೆ ಎಂಬ ಎಸ್‌.ಟಿ.ಸೋಮಶೇಖರ ಹೇಳಿಕೆ ಸಮರ್ಥಿಸಿಕೊಂಡ ಯತ್ನಾಳ, ಸೋಮಶೇಖರ ೨೦-೨೫ ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಅವರ ಅನುಭವದಿಂದಾಗಿ ಅವರು ನಿಜ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್‌ ಸಂಸ್ಕೃತಿ ಏನೆಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯಕ್ಕೆ ಕಾಂಗ್ರೆಸ್‌ ಕೆಟ್ಟ ನಾಯಕತ್ವ ನೀಡಿದೆ ಎಂದರು.
ಬೆಂಗಳೂರಿನಲ್ಲಿ ಸಿಡಿ ಮಾಡುವ ಕೆಲವರು ಬ್ಲಾಕ್‌ಮೇಲ್‌ ದಂಧೆ ಮಾಡುತ್ತಾರೆ. ಸಿಡಿ ಮೂಲಕ ರಾಜಕೀಯ ವಿರೋಧಿಗಳಿಂದ ಹಣ ವಸೂಲಿ ಮಾಡುವುದೇ ಅವರ ಉದ್ಯೋಗವಾಗಿದೆ. ಇತ್ತೀಚಿಗೆ ಬಂಧನಕ್ಕೀಡಾದ ಯುವರಾಜ ಕೂಡ ಇಂಥದೇ ದಂಧೆ ಮಾಡುತ್ತಿದ್ದನಲ್ಲದೇ ಮುಖ್ಯಮಂತ್ರಿ ಮನೆಯಲ್ಲಿರುತ್ತಿದ್ದ ಎಂದು ಹೇಳಿದರು.
ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವ ಕುರಿತು ರಾಜ್ಯ ಸರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ಯಾವುದೇ ಗಡುವು ನೀಡದಿರುವುದನ್ನು ಖಂಡಿಸಿದ ಯತ್ನಾಳ, ಇದೊಂದು ರಾಜಕೀಯ ಸ್ಟಂಟ್‌, ಇದರಿಂದ ಯಾವುದೇ ಪ್ರಯೋಜನವಿಲ್ಲ. ಮೀಸಲಾತಿಗೆ ಅರ್ಹರಾಗಿರುವ ಎಲ್ಲ ಸಮುದಾಯಗಳಿಗೂ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ನನ್ನದು ಏಕಾಂಗಿ ಹೋರಾಟ. ರಾಮ ಏಕಾಂಗಿಯಾಗಿದ್ದರೂ ಅವನು ರಾವಣನಂಥ ದೊಡ್ಡ ರಾಕ್ಷಸನನ್ನು ಸಂಹಾರ ಮಾಡಿದ. ನಾನು ರಾವಣನಂಥವರಿಗೆ ಎಂದಿಗೂ ಹೆದರುವುದಿಲ್ಲ. ಕೊನೆಗೆ ನನಗೇ ಗೆಲುವು ಒಲಿಯುವುದು ಶತಸಿದ್ಧ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement