ಲಾಕ್‌ಡೌನ್‌ ಪ್ರಸ್ತಾಪವಿಲ್ಲ, ಆದ್ರೆ ಜನ ನಿಯಮ ಪಾಲಿಸದಿದ್ರೆ ಅನಿವಾರ್ಯವಾಗಬಹುದು:ಸಿಎಂ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಲು ಲಾಕ್‌ಡೌನ್ ಮಾಡುವ ಚಿಂತನೆ ಇಲ್ಲ ಆದರೆ, ಜನ ಸರ್ಕಾರದ ನಿಯಮ ಪಾಲಿಸದಿದ್ದರೆ ಲಾಕ್‌ಡೌನ್ ಅನಿವಾರ್ಯವಾಗಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಸಿದ್ದಾರೆ.
ಡಾಲರ್ಸ್‌ ಕಾಲೋನಿಯ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದೆ. ಜನ ಎಚ್ಚರವಹಿಸಬೇಕು, ಇಲ್ಲದಿದ್ದರೆ ಲಾಕ್‌ಡೌನ್ ಮಾಡುವಂತಹ ಪರಿಸ್ಥಿತಿ ಬರಬಹುದು. ಅಂತಹ ಪರಿಸ್ಥಿತಿ ಬಾರದಂತೆ ಜನ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಸದ್ಯಕ್ಕಂತೂ ಲಾಕ್‌ಡೌನ್ ಪ್ರಸ್ತಾಪ ಇಲ್ಲ. ಲಾಕ್‌ಡೌನ್ ಆಗಬಾರದು, ರಾತ್ರಿ ಕರ್ಫ್ಯೂ ಜಾರಿಯಾಗಬಾರದು ಎಂದಿದ್ದರೆ ಜನ ಸಹಕರಿಸಬೇಕು ಎಂದು ಅವರು ಹೇಳಿದರು.
ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಸೋಮವಾರ (ಮಾ.೧೫) ಅಧಿಕಾರಿಗಳು ಹಾಗೂ ತಜ್ಞರ ಸಭೆ ಕರೆದಿದ್ದೇನೆ. ನಾಳಿನ ಸಭೆಯಲ್ಲಿ ಬಿಗಿ ಕ್ರಮದ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ. ಇನ್ನು ಮುಂದೆ ಮದುವೆ ಸಮಾರಂಭಗಳಿಗೆ ಇಂತಿಷ್ಟೇ ಜನರು ಹಾಜರಾಗಬೇಕು ಎಂಬ ಬಗ್ಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುತ್ತೇವೆ ಎಂದರು.
ನೆರೆಯ ಮಹಾರಾಷ್ಟ್ರದಲ್ಲೂ ಸೋಂಕು ಹೆಚ್ಚಳವಾಗುತ್ತಿದೆ. ಗಡಿಯಲ್ಲೂ ಬಿಗಿ ಕ್ರಮಕೈಗೊಳ್ಳುವ ಬಗ್ಗೆ ಸೋಮವಾರದ ಸಭೆಯಲ್ಲಿ ಚರ್ಚೆ ಮಾಡುತ್ತೇವೆ, ಲಾಕ್‌ಡೌನ್‌ಗೆ ಅವಕಾಶವಾಗದಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದಾಗಿ ಅವರು ಹೇಳಿದರು.
ವಿಧಾನಸಭೆಯಲ್ಲಿ ನಾಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಡಿ ವಿಚಾರ ಪ್ರಸ್ತಾಪ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ನಾಯಕರಿಗೆ ಯಾವ ವಿಚಾರವಾದರೂ ಪ್ರಸ್ತಾಪ ಮಾಡುವ ಸರ್ವ ಸ್ವತಂತ್ರ ಇದೆ. ಅವರು ಸರಿಯಾದ ರೀತಿಯಲ್ಲಿ ವಿಷಯದ ಮೇಲೆ ಬೆಳಕು ಚೆಲ್ಲಿದರೆ ಅವರ ಸಲಹೆ ಮೇಲೆ ಬಿಗಿ ಮಾಡಲು ಅನುಕೂಲವಾಗುತ್ತದೆ ಎಂದರು.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement