ಕೊರೊನಾ ಸೋಂಕಿತರು: ಬೆಂಗಳೂರು ನಗರ ಜಿಲ್ಲೆ ದೇಶದಲ್ಲಿ ೫ನೇ ನಂಬರ್‌..!

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ದೇಶದಲ್ಲಿ ಅತಿ ಹೆಚ್ಚು ಕೊವಿಡ್‌-೧೯ ಸೋಂಕಿತರಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಜಿಲ್ಲೆ ೫ನೇ ಸ್ಥಾನ ಪಡೆದಿರುವುದು ಎಚ್ಚರಿಕೆ ವಹಿಸಬೇಕು ಎಂಬುದರ ಮುನೂಚನೆಯಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 6,107 ಸಕ್ರಿಯ ಸೋಂಕಿತರಿದ್ದಾರೆ. 18,474 ಸಕ್ರಿಯ ಸೋಂಕಿತರಿರುವ ಪುಣೆ ಮೊದಲ ಸ್ಥಾನದಲ್ಲಿದೆ. 12,724 ಸಕ್ರಿಯ ಸೋಂಕಿತರಿರುವ ನಾಗಪುರ ಎರಡನೇ ಸ್ಥಾನ, 10,460 ಸಕ್ರಿಯ ಸೋಂಕಿತರಿರುವ ಥಾಣೆ ಮೂರನೇ ಸ್ಥಾನ ಹಾಗೂ 9,973 ಸಕ್ರಿಯ ಸೋಂಕಿತರಿರುವ ಮುಂಬಯಿ ನಾಲ್ಕನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದ ಸಂಪರ್ಕ ಪದೇ ಪದೆ ಮುಳುವಾಗುತ್ತಿದೆ. ವರ್ಷದ ಹಿಂದೆ ಕೇರಳದಲ್ಲಿ ಆರಂಭಿಕ ಪ್ರಕರಣಗಳು ಪತ್ತೆಯಾಗಿತ್ತು. ದೇಶದೆಲ್ಲೆಡೆ ಪರಿಸ್ಥಿತಿ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದರೂ ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿತ್ತು. ಮಹಾರಾಷ್ಟ್ರದಲ್ಲಂತೂ ಕಳೆದ ವರ್ಷ ಪರಿಸ್ಥಿತಿ ಕೈಮೀರಿ ಹೋಗಿತ್ತು. ಇದೀಗ ಮತ್ತೆ ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣ ವರದಿಯಾಗುತ್ತಿವೆ. ಜತೆಗೆ ನೆರೆಯ ಆಂಧ್ರಪ್ರದೇಶದಲ್ಲೂ ಹೆಚ್ಚಿನ ಪ್ರಕರಣಗಳಿವೆ.
ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ಗುಜರಾತ್‌, ತಮಿಳುನಾಡು ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಒಂದು ದಿನದಲ್ಲಿ ವರದಿಯಾದ ಪ್ರಕರಣಗಳು ಶೇ 87.73 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಒಂದು ದಿನದಲ್ಲಿ 15,602 , ಕೇರಳದಲ್ಲಿ 2,035 ಮತ್ತು ಪಂಜಾಬ್‌ನಲ್ಲಿ 1,510 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟು 2.10 ಲಕ್ಷ ಕೋವಿಡ್‌ ಕೇಸ್‌ಗಳು ಸಕ್ರಿಯವಾಗಿದ್ದು, ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್‌ಗಳಲ್ಲಿ ಪತ್ತೆಯಾಗಿರುವ ಪ್ರಕರಣಗಳು ಶೇ 76.93 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯತ್ತಲೇ ಇರುತ್ತವೆ. ಈ ಪ್ರತಿಭಟನೆಗೆ ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಇದು ಕೂಡ ಸೋಂಕು ಹಬ್ಬಲು ಪ್ರಮುಖ ಕಾರಣವಾಗುತ್ತಿದೆ.
ನಗರದಲ್ಲಿ 10 ವಾರ್ಡ್‌‍ಗಳು ಕೊರೊನಾ ಹಾಟ್‌‍ಸ್ಪಾಟ್‌‍ಗಳಾಗಿ ಪರಿವರ್ತನೆಗೊಂಡಿವೆ. ಬೆಳ್ಳಂದೂರು ಪ್ರಥಮ ಸ್ಥಾನದಲ್ಲಿದ್ದರೆ, ನಂತರದ ಸ್ಥಾನ ಶಾಂತಿನಗರ, ಹಗದೂರು, ಎಚ್‌‍ಎಸ್‌‍ಆರ್‌ ಲೇಔಟ್‌, ಉತ್ತರಹಳ್ಳಿ, ಅರಕೆರೆ, ದೊಡ್ಡನೆಕ್ಕುಂದಿ, ಸುಭಾಷ್‌‍ನಗರ, ಕೋರಮಂಗಲ ಹಾಗೂ ಗಾಂಧಿನಗರ ವಾರ್ಡ್‌ ಸ್ಥಾನ ಪಡೆದಿವೆ.
ಅತಿಹೆಚ್ಚು ಸೋಂಕಿತರಿರುವ ದೇಶದ ಟಾಪ್‌ 10 ಜಿಲ್ಲೆಗಳು
ಪುಣೆ- 18,474
ನಾಗಪುರ- 12, 724
ಥಾಣೆ- 10,460
ಮುಂಬಯಿ- 9,973
ಬೆಂಗಳೂರು- 6,107
ಎರ್ನಾಕುಲಂ- 5,430
ಅಮರಾವತಿ- 5,259
ಜಲಗಾಂವ್‌- 5,029
ನಾಸಿಕ್‌- 4, 525
ಔರಂಗಾಬಾದ್‌- 4,354

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement