ಆಧಾರ ಲಿಂಕ್‌ ಆಗದ ಪಡಿತರ ಚೀಟಿ ರದ್ದು ಪಡಿಸಿದ ಕುರಿತು ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ಆಧಾರ ಕಾರ್ಡ್‌ನೊಂದಿಗೆ ಲಿಂಕ್‌ ಆಗದ ಮೂರು ಕೋಟಿ ಪಡಿತರ ಚೀಟಿಗಳನ್ನು ಕೇಂದ್ರ ಸರಕಾರ ರದ್ದುಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ, ಈ ಕುರಿತು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಂದ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರ ನ್ಯಾಯಪೀಠ, ಇದು ತುಂಬಾ ಗಂಭೀರ ವಿಷಯವಾಗಿದೆ. ಈ ವಿಷಯವನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ. ಆರಂಭದಲ್ಲಿ, ಅರ್ಜಿದಾರ ಕೊಯಿಲಿ ದೇವಿ ಪರ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಹಾಜರಾದರು.
ಮೂರು ಕೋಟಿ ಪಡಿತರ ಚೀಟಿಗಳನ್ನು ಕೇಂದ್ರ ಸರಕಾರ ರದ್ದುಪಡಿಸಿರುವುದು ಪ್ರಮುಖ ವಿಷಯವಾಗಿದೆ ಎಂದು ಗೊನ್ಸಾಲ್ವೆಸ್ ತಮ್ಮ ವಾದ ಮಂಡಿಸಿದರು.
ಆಧಾರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ರದ್ದುಪಡಿಸಿದ ಕುರಿತು ಸರಕಾರಗಳು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿತು.
ಆಧಾರ್ ಕಾರ್ಡ್‌ಗಳನ್ನು ಹೊಂದಿರದ ಕಾರಣ ಪಡಿತರ ಸರಬರಾಜಿನಿಂದ ವಂಚಿತರಾದ ಜನರ ಹಸಿವಿನಿಂದ ಸಾವನ್ನಪ್ಪಿದ ಆರೋಪದ ಮೇಲೆ 2019 ರ ಡಿಸೆಂಬರ್ 9 ರಂದು ಉನ್ನತ ನ್ಯಾಯಾಲಯವು ಎಲ್ಲ ರಾಜ್ಯಗಳಿಂದ ಪ್ರತಿಕ್ರಿಯೆ ಕೋರಿತ್ತು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ಸೆಕ್ಷನ್ 14, 15 ಮತ್ತು 16 ರಲ್ಲಿರುವ ಕುಂದುಕೊರತೆಗಳ ಪರಿಹಾರ ಕಾರ್ಯವಿಧಾನವನ್ನು ಅನುಷ್ಠಾನಗೊಳಿಸಲು ಅವರು ಕೈಗೊಂಡ ಕ್ರಮಗಳನ್ನು ತಿಳಿಸಲು ಪ್ರತಿವಾದಿ ರಾಜ್ಯಗಳಿಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿದೆ.

ಪ್ರಮುಖ ಸುದ್ದಿ :-   ಆಘಾತಕಾರಿ...| ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿ ಇರಿಸಿಕೊಂಡ ಬ್ಯಾಂಕ್‌ ; ಹಣದ ಕಂತು ಕೊಟ್ಟ ಬಳಿಕವೇ ಮಹಿಳೆಯ ಬಿಡುಗಡೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement