ಸಿಡಿ ಯುವತಿ ಮನೆಯಲ್ಲಿ ಸಿಕ್ಕ ಲಕ್ಷಾಂತರ ಹಣ ಎಲ್ಲಿಂದ ಬಂತು?: ಎಸ್‌ಐಟಿ ತನಿಖೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿಯ ಆರ್‌.ಟಿ ನಗರ ನಿವಾಸದಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ನಡೆಸಿದ್ದು, ಈ ವೇಳೆ ಕೆಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.
ಯುವತಿಯ ಮನೆಯಲ್ಲಿ 23 ಲಕ್ಷ ರೂ. ನಗದು ಹಣ ಸಿಕ್ಕಿದೆ ಎನ್ನಲಾಗಿದ್ದು, ಕೆಲಸ ಕೊಡಿಸುವುದಾಗಿ ರಮೇಶ ಜಾರಕಿಹೊಳಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ಯುವತಿ ಕೈಗೆ ಇಷ್ಟೊಂದು ಹಣ ಬಂದಿದ್ದು ಎಲ್ಲಿಂದ? ಯಾರು ಕೊಟ್ಟರು ಎಂದು ಹುಡುಕುಲು ಎಸ್‌ಐಟಿ ಆರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಶ್ಲೀಲ ಸಿಡಿ ಹೊರ ಬಂದ ಬಳಿಕ ಕಣ್ಮರೆಯಾಗಿರುವ ಈ ಯುವತಿಯದ್ದು ಎನ್ನಲಾದ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಲಾಗಿತ್ತು. ಸಿಡಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡ ರಚನೆಯಾಗಿ ರಮೇಶ್ ಜಾರಕಿಹೊಳಿ ದೂರು ನೀಡುತ್ತಿದ್ದಂತೆ ಈ ಬೆಳವಣಿಗೆ ನಡೆದಿತ್ತು.
ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಜಾರಕಿಹೊಳಿ ಮೋಸ ಮಾಡಿದ್ದರು. ಅವರೇ ನನ್ನ ಅಶ್ಲೀಲ ಸಿಡಿ ಬಿಡುಗಡೆ ಮಾಡಿದ್ದಾರೆ. ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಕುಟುಂಬಕ್ಕೆ ಅವಮಾನವಾಗಿದೆ. ನನ್ನ ತಂದೆ ತಾಯಿ ಎರಡು ಸಲ ಆತ್ಮಹತ್ಯೆ ಯತ್ನ ಮಾಡಿಕೊಂಡಿದ್ದಾರೆ.ನಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಹೇಳಿದ್ದ ಯುವತಿಯದ್ದು ಎನ್ನಲಾದ ವಿಡಿಯೋ ವೈರಲ್ ಆಗಿತ್ತು.
ಇದಾದ ನಂತರ ಪ್ರಕರಣ ಹೊಸ ಆಯಾಮ ಪಡೆದುಕೊಂಡಿತ್ತು. ಯುವತಿಗೆ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಲಿಲ್ಲ. ಇಮೇಲ್ ಮಾಡಿದರೂ ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಈ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಜಿ ಪತ್ರಕರ್ತರನ್ನು ವಿಚಾರಣೆ ನಡೆಸಿದ ಬಳಿಕ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಎಸ್‌ಐಟಿ ಕಲೆ ಹಾಕಿತ್ತು ಎನ್ನಲಾಗಿದೆ. ಇದೀಗ ಪ್ರಮುಖ ಆರೋಪಿಗಳ ಹಣದ ಮೂಲ ಜಾಲಾಡಲು ಮುಂದಾಗಿದೆ. ಶಂಕಿತ ಆರೋಪಿ ಎನ್ನಲಾದ ಮಾಜಿ ಪತ್ರಕರ್ತರ ಮನೆ ಮೇಲೆ ದಾಳಿ ನಡೆಸಿದಾಗಲೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ಇದಕ್ಕೂ ಎರಡು ದಿನ ಮುನ್ನ ಎಸ್‌ಐಟಿ ಅಧಿಕಾರಿಗಳು ವಿಜಯಪುರದಲ್ಲಿರುವ ಶಂಕಿತ ಹ್ಯಾಕರ್ ಆರೋಪಿ ಮನೆ ಮೇಲೆ ಶೋಧ ನಡೆಸಿದಾಗ 40 ಲಕ್ಷ ರೂ.ಮೌಲ್ಯದ ಡಿಡಿ ಹಾಗೂ ಚೆಕ್ ಗಳು ಸಿಕ್ಕಿದ್ದವು. ಇದೆಲ್ಲವನ್ನು ನೋಡಿದರೆ, ಸಿಡಿ ಪ್ರಕರಣದ ಹಿಂದೆ ಬಹುದೊಡ್ಡ ಹಣಕಾಸಿನ ವಹಿವಾಟು ನಡೆದಿರುವ ಗುಮಾನಿ ಎದ್ದಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಆರೋಪಿಗಳ ಬಳಿ ಸಿಕ್ಕ ಹಣದ ಮೂಲದ ಹಿಂದೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್​ ಮುಖಂಡನಿಗೆ ಕಪಾಳಕ್ಕೆ ಹೊಡೆದ ಡಿಸಿಎಂ ಡಿ.ಕೆ.ಶಿವಕುಮಾರ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement