ಉದ್ಯೋಗ-ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರಿಯುತ್ತದೆ: ಸುಪ್ರೀಂ ಕೋರ್ಟ್‌

ನವ ದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರೆಯುತ್ತದೆ ಎಂದು ಸುಪ್ರೀಂಕೋರ್ಟ್ ಕೇಳಿದೆ. ಶುಕ್ರವಾರ ಮರಾಠಾ ಮೀಸಲಾತಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಒಟ್ಟಾರೆ ಶೇಕಡ 50 ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕಿದರೆ ಉದ್ಬವಿಸಬಹುದಾದ ಅಸಮಾನತೆಯ ಬಗ್ಗೆಯೂ ತನ್ನ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರಿಗೆ ಈ ರೀತಿ ಕೇಳಿದೆ.
ಬದಲಾದ ಸಂದರ್ಭಗಳಲ್ಲಿ ಮಂಡಲ್ ತೀರ್ಪನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿತು. ಐತಿಹಾಸಿಕ ಮಂಡಲ್ ತೀರ್ಪಿನಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಲಾಗಿತ್ತು.
1931 ರ ಜನಗಣತಿಯ ಮೇಲೆ ಮಂಡಲ್ ತೀರ್ಪನ್ನು ರೂಪಿಸಲಾಗಿತ್ತು.ಬದಲಾದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಕೋಟಾಗಳನ್ನು ಸರಿಪಡಿಸಲು ನ್ಯಾಯಾಲಯಗಳು ರಾಜ್ಯಗಳಿಗೆ ಬಿಡಬೇಕು ಎಂದು ರೋಹ್ಟಗಿ, ಮರಾಠರಿಗೆ ಮೀಸಲಾತಿ ನೀಡುವ ಮಹಾರಾಷ್ಟ್ರ ಕಾನೂನಿನ ಪರವಾಗಿ ವಾದಿಸಿದರು. ಇಂದ್ರಾ ಸಾಹ್ನಿ ಪ್ರಕರಣ ಎಂದೂ ಕರೆಯಲ್ಪಡುವ ಮಂಡಲ್ ತೀರ್ಪಿನ ವಿವಿಧ ಅಂಶಗಳನ್ನು ಉಲ್ಲೇಖಿಸಿದ ಅವರು, ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಶೇ .10 ರಷ್ಟು ಮೀಸಲಾತಿ ನೀಡುವ ಕೇಂದ್ರದ ನಿರ್ಧಾರವು ಶೇ.50ರ ಮಿತಿಯನ್ನು ಉಲ್ಲಂಘಿಸಿದೆ ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಸುಪ್ರೀಂಕೋರ್ಟ್‌, ನೀವು ಸೂಚಿಸಿದಂತೆ, ಶೇಕಡಾ 50 ಅಥವಾ ಮಿತಿಯಿಲ್ಲದಿದ್ದರೆ, ಆಗ ಸಮಾನತೆಯ ಪರಿಕಲ್ಪನೆ ಏನು? ನಾವು ಅಂತಿಮವಾಗಿ ಅದನ್ನು ಎದುರಿಸಬೇಕಾಗುತ್ತದೆ. ಅದರಿಂದಾಗುವ ಅಸಮಾನತೆ ಬಗ್ಗೆ ನಿಮ್ಮ ಉತ್ತರ ಏನು? ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರೆಯುತ್ತದೆ ಎಂದು ಐವರು ನ್ಯಾಯಮೂರ್ತಿಗಳಾದಅಶೋಕ್ ಭೂಷಣ್, ಎಲ್. ನಾಗೇಶ್ವರ ರಾವ್, ಎಸ್ ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ನ್ಯಾಯಪೀಠ ಕೇಳಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ ಮತ್ತು ರಾಜ್ಯಗಳು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ನ್ಯಾಯಪೀಠ ಹೇಳಿತು.
ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮರಾಠರಿಗೆ ಮೀಸಲಾತಿ ನೀಡುವುದನ್ನು ಮುಂಬೈ ಹೈಕೋರ್ಟ್ ಎತ್ತಿಹಿಡಿದಿತ್ತು. ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

4.1 / 5. 9

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement