ಆರ್‌ಎಸ್ಎಸ್‌ ಸರಕಾರ್ಯವಾಹರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

 

ಬೆಂಗಳೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಶನಿವಾರ ಆಯ್ಕೆ ಮಾಡಲಾಗಿದೆ.

ಚಿತ್ರ ಕೃಪೆ-ಇಂಟರ್ನೆಟ್

2009ರಿಂದ ದಾಖಲೆಯ 12 ವರ್ಷಗಳಿಂದ ಈ ಸ್ಥಾನದಲ್ಲಿದ್ದ ಸುರೇಶ್ ‘ಭಯ್ಯಾಜಿ’ ಜೋಶಿ ಅವರ ಜಾಗಕ್ಕೆ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಆರೆಸ್ಸೆಸ್‌ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಅರೆಸ್ಸೆಸ್‌ನ ಪ್ರಧಾನ ಕಾರ್ಯದರ್ಶಿಯ ಆಯ್ಕೆ ನಡೆಯುತ್ತದೆ.
ಸಾಮಾನ್ಯವಾಗಿ ಪ್ರತಿ ಬಾರಿಯೂ ಆರೆಸ್ಸೆಸ್‌ನ ವಾರ್ಷಿಕ ಸಭೆ ಅದರ ಕೇಂದ್ರ ಕಚೇರಿ ನಾಗಪುರದಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಾದ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.
ದತ್ತಾತ್ರೇಯ ಹೊಸಬಾಳೆ: ಮೂಲತಃ ಶಿವಮೊಗ್ಗದ ಸೊರಬ ತಾಲೂಕಿನ ಹೊಸಬಾಳೆಯವರಾದ ದತ್ತಾತ್ರೇಯ ಹೆಗಡೆ ಅವರು 1975ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ನವನಿರ್ಮಾಣ ಆಂದೋಳನದಲ್ಲಿ ಪಾಲ್ಗೊಳ್ಳಲು ಎಂ.ಎ.ಪದವಿ ಅರ್ಧಕ್ಕೆ ನಿಲ್ಲಿಸಿ ಬಂದವರು. ಅಲ್ಲಿಂದ ಅವರ ಹೋರಾಟದ ಬದುಕು ಆರಂಭವಾಯಿತು.
ಬಾಲ್ಯದಿಂದಲೂ ಆರ್‌ ಎಸ್‌ ಎಸ್‌ ಸ್ವಯಂಸೇವಕರಾಗಿದ್ದ ಅವರು ಪಿಯು ಓದುವಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿದ್ದರು. ನಂತರ 1968-72ರ ಅವಧಿಯಲ್ಲಿ ಅವರು ಸೊರಬ ಮತ್ತು ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯ ಮುಖ್ಯ ಶಿಕ್ಷಕರೂ ಆಗಿದ್ದರು.
1975ರಲ್ಲೇ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಓಟಿಸಿ (ಆಫೀಸರ್ಸ್‌ ಟ್ರೈನಿಂಗ್‌ ಕೋರ್ಸ್‌) ಶಿಬಿರವನ್ನು ಮಧ್ಯಪ್ರದೇಶದ ದುರ್ಗ್‌ನಲ್ಲಿ ಮಾಡಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ಅವರು ರಾಜ್ಯದೆಲ್ಲೆಡೆ ಸುತ್ತಾಡಿ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿದರು. ಆದರೆ ಅವರನ್ನು 1975ರ ಡಿಸೆಂಬರ್‌ 18ರಂದು ಮೀಸಾ ಕಾಯ್ದೆಯಡಿ ಬಂಧಿಸಲಾಯಿತು. ತುರ್ತು ಪರಿಸ್ಥಿತಿಯ ನಂತರದಲ್ಲಿ ದತ್ತಾತ್ರೇಯ ಹೊಸಬಾಳೆಯವರು ಸಂಘದ ಪೂರ್ಣಾವಧಿ ಪ್ರಚಾರಕರಾದರು. ಸಂಘದ ಸೂಚನೆಯ ಮೇರೆಗೆ ಅವರು ತಮ್ಮ ಪ್ರಚಾರಕ ಹೊಣೆಗಾರಿಕೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮೂಲಕ ಆರಂಭಿಸಿದರು. 1992ರಲ್ಲಿ ಅವರು ಅಭಾವಿಪ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿಯಾಗಿ 2002ರ ವರೆಗೆ ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಅವರಿಗೆ ಅಖಿಲ ಭಾರತ ಸಹ ಬೌದ್ಧಿಕ್‌ ಪ್ರಮುಖ್‌ ಜವಾಬ್ದಾರಿಯನ್ನು 2003ರಲ್ಲಿ ನೀಡಲಾಯಿತು. ಅವರು 2009ರ ವರೆಗೆ ಈ ಜವಾಬ್ದಾರಿ ನಿಭಾಯಿಸಿದರು. 2009ರಲ್ಲಿ ಅವರಿಗೆ ಸಂಘದ ಸಹ ಸರಕಾರ್ಯವಾಹ (ಜಂಟಿ ಪ್ರಧಾನ ಕಾರ್ಯದರ್ಶಿ) ಹೊಣೆಗಾರಿಕೆ ನೀಡಲಾಯಿತು.
ದತ್ತಾತ್ರೇಯ ಹೊಸಬಾಳೆ ಅವರ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರು ಕನ್ನಡ ಮಾಸಿಕ “ಅಸೀಮಾ’ದ ಸ್ಥಾಪಕ ಸಂಪಾದಕರಾಗಿದ್ದಾರೆ. ತುರ್ತು ಪರಿಸ್ಥಿತಿಯ ಘೋರ ಅನುಭವಗಳನ್ನು ಅತ್ಯಂತ ಸಂವೇದನಾಶೀಲವಾಗಿ ಮತ್ತು ಅಧಿಕೃತವಾಗಿ ದಾಖಲಿಸಿದ “ಭುಗಿಲು’ ಪುಸ್ತಕದ ಸಂಪಾದನ ತಂಡದಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

 

 

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement