ಕೇಂದ್ರ ಸರ್ಕಾರ 22 ಭಾಷೆಗಳಿಗೆ ಸಮಾನ ಸ್ಥಾನಮಾನ ನೀಡಬೇಕು:ನಾಗಾಭರಣ

ಯಾದಗಿರಿ: ಕೇಂದ್ರ ಸರ್ಕಾರ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಹೇಳಿದಂತೆ 22 ಭಾಷೆಗಳಿಗೂ ಸಮಾನ ಅವಕಾಶ ಕೊಡಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಅಗ್ರ ಸ್ಥಾನ ಕೊಡಲಾಗಿದೆ. ಅದೇ ತಮಿಳು ಭಾಷೆ ಬಿ.ಕೆಟಗೆರಿಯಲ್ಲಿ ಬರುವಲ್ಲಿ ಯಶಸ್ವಿಯಾಗಿದೆ. ಆದರೆ ಕನ್ನಡ ಭಾಷೆ ಇನ್ನೂ ಸಿ. ಕೆಟಗೆರಿಯಲ್ಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಶ್ರವ್ಯ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡ ಭಾಷಾ ಪ್ರಯೋಗ ಅತ್ಯಂತ ಕೀಳು ಮಟ್ಟದಲ್ಲಿ ನಡೆಯುತ್ತಿದೆ. ಹೀಗಾಗಿ ಮಾ.29 ರಿಂದ ಮೂರು ದಿನಗಳ ಕಾಲ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಕುರಿತಾಗಿ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮುದ್ರಣ ಮಾಧ್ಯಮಕ್ಕೆ ತನ್ನದೇಯಾದ ಸ್ಟೈಲ್‌ಶೀಟ್ ಇರುತ್ತದೆ. ಹೀಗಾಗಿ ಅಲ್ಲಿ ಕನ್ನಡ ಭಾಷೆ ಸರಿಯಾಗಿ ಬಳಸಲಾಗುತ್ತಿದೆ. ಆದರೆ ಎಫ್‌ಎಂ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಭಾಷಾ ಪ್ರಯೋಗ ಸರಿಯಾಗಿಲ್ಲ. ಈ ಹಿಂದೆ ನಾವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಅಭಿಯಾನ ನಡೆಸಿ ಯಶಸ್ವಿಯಾಗಿದ್ದೇವೆ ಎಂದರು.
ಶಾಲೆಗಳಲ್ಲಿ ಕನ್ನಡ ಬಳಕೆಗೆ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿತ್ತು. ಆದರೆ ಪ್ರಸಕ್ತ ಕೊವಿಡ್ ಬಂದಿದ್ದರಿಂದ ಅದನ್ನು ಜಾರಿಗೊಳಿಸಲಾಗಿಲ್ಲ. ಉದ್ಯೋಗಕ್ಕಾಗಿ ಇಂಗ್ಲಿಷ್‌ ಕಲಿಕೆ ಅವಶ್ಯ ಎಂದು ತಿಳಿದಿರುವ ಪಾಲಕರು ಅದರಿಂದ ಹೊರಬಂದು ಮಾತೃ ಭಾಷೆಗೆ ಒಲವು ತೋರಬೇಕು ಎಂದು ಹೇಳಿದರು.
ಪ್ರಾಧಿಕಾರ ಕೇವಲ ಸರ್ಕಾರಕ್ಕೆ ಶಿಫಾರಸ್ಸು ಮಾಡಬಹುದೇ ಹೊರತು ಯಾವುದೇ ಕ್ರಮ ಜರಗಿಸಲು ನಮಗೆ ಅಧಿಕಾರವಿಲ್ಲ ಎಂದು ಹೇಳಿದ ಅವರು, ಬೆಳಗಾವಿ ಗಡಿ ಭಾಗದ ಬಗ್ಗೆ ಸರ್ಕಾರ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.
ಭಾವನಾತ್ಮಕತೆಗೆ ಇಲವು ತೋರದೆ ಭಾಷೆಯ ಬಗ್ಗೆ ಒಲವು ಇದ್ದರೆ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

5 / 5. 1

ಶೇರ್ ಮಾಡಿ :

  1. geek

    ಭಾಷಾ ಸಮಾನತೆಯನ್ನು ತರಲು ಆಧುನಿಕ ತಂತ್ರಜ್ಞಾನದ ನೆರವು ತೆಗೆದುಕೊಳ್ಳುವ ಅಗತ್ಯ ಇದೆ. ಭವಿಷ್ಯದಲ್ಲಿ ಅಟೋಮ್ಯಾಟಿಕ್ ಟ್ರಾನ್ಸಲೇಟರುಗಳು ಪ್ರಬಲವಾದಂತೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಸಾಂಸ್ಕೃತಿಕ ಅಧಿಪತ್ಯಕ್ಕೆ ಧಕ್ಕೆ ಬೀಳಲಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement