ಉದ್ಧವ್‌ ರಾಜೀನಾಮೆ ಕೇಳಿದ್ದಕ್ಕೆ ಸಂಸತ್ತಿನ ಮೊಗಸಾಲೆಯಲ್ಲಿ ನನಗೆ ಶಿವಸೇನೆ ಸಂಸದ ಸಾವಂತ್‌ ಬೆದರಿಕೆ :ಸಂಸದೆಯಿಂದ ಸ್ಪೀಕರ್​ಗೆ ದೂರು

ನವ ದೆಹಲಿ: ಅಮರಾವತಿಯ ಸ್ವತಂತ್ರ ಸಂಸದೆ ನವನೀತ್​ ಕೌರ್​ ರಾಣಾ ಅವರು ಶಿವಸೇನೆಯ ಸಂಸದನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾನು ಕೆಳಮನೆಯಲ್ಲಿ ಮಹಾರಾಷ್ಟ್ರ ಸರ್ಕಾರ ವಿರುದ್ಧ ಮಾತನಾಡಿದ್ದಕ್ಕಾಗಿ ಶಿವಸೇನೆಯ ಸಂಸದ ಅರವಿಂದ್ ಸಾವಂತ್ ನನಗೆ ಲೋಕಸಭೆಯ ಮೊಗಸಾಲೆಯಲ್ಲಿ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕ ಶಿವಸೇನೆ ಪಕ್ಷದ ಲೆಟರ್​ಹೆಡ್​ ಇರುವ ಪತ್ರದ ಮೂಲಕ ಮತ್ತು ಫೋನ್​ ಮೂಲಕ ಆಸಿಡ್‌ ದಾಳಿ ಬೆದರಿಕೆಗಳು ಬರುತ್ತಿವೆ ಎಂದು ನವನೀತ್​ ಕೌರ್​ ಆರೋಪಿಸಿದ್ದು, ಈ ಕುರಿತು ಸ್ಪೀಕರ್​ ಓಂ ಬಿರ್ಲಾರಿಗೆ ಪತ್ರವನ್ನೂ ಬರೆದಿದ್ದಾರೆ.ನವನೀತ್ ಕೌರ್​ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದೆಯಾದವರು.
ಮಾರ್ಚ್​ 22ರಂದು ನವನೀತ್​ ಕೌರ್​ ರಾಣಾ ಅವರು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಶಿವಸೇನೆ ಸಂಸದ ಅರವಿಂದ್ ಸಾವಂತ್​ ನನಗೆ ಬೆದರಿಕೆ ಹಾಕಿದರು. ಇದು ನನಗೆ ಮಾತ್ರವಲ್ಲ, ಇಡೀ ದೇಶದ ಮಹಿಳೆಯರಿಗೆ ಅವಮಾನ ಆಗುವ ಸಂಗತಿ. ಅರವಿಂದ್ ಸಾವಂತ್​ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ನಾನು ಲೋಕಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಆಡಳಿತವನ್ನು ಪ್ರಶ್ನೆ ಮಾಡಿದೆ. ನಂತರ ಹೊರಬರುತ್ತಿದ್ದಂತೆ ಮೊಗಸಾಲೆಯಲ್ಲಿ ನನ್ನೆದುರು ಬಂದ ಅರವಿಂದ್ ಸಾವಂತ್​, ನೀವು ಅದು ಹೇಗೆ ಮಹಾರಾಷ್ಟ್ರದಲ್ಲಿ ಓಡಾಡುತ್ತೀರಿ ನೋಡುತ್ತೇನೆ.. ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿಸಿದ್ದಾರೆ. ಎಂದು ನವನೀತ್​ ತಿಳಿಸಿದ್ದಾರೆ.
ಅರವಿಂದ್​ ಸಾವಂತ್​ ಬೆದರಿಕೆ ಹಾಕುವ ಮೊದಲೂ ನನಗೆ ಶಿವಸೇನೆ ಲೆಟರ್​ ಹೆಡ್​ ಇರುವ ಪತ್ರದಿಂದ ಬೆದರಿಕೆ ಬಂದಿತ್ತು. ಈ ಬಗ್ಗೆ ಕೂಡ ಪೊಲೀಸರು, ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದೇನೆ. ನೀನು ಉದ್ಧವ್ ಠಾಖ್ರೆ ವಿರುದ್ಧ ಮಾತನಾಡುತ್ತಿದ್ದರೆ, ನಿನ್ನ ಮುಖಕ್ಕೆ ಆಸಿಡ್ ಹಾಕುತ್ತೇವೆ. ಎಂದೂ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ, ಕರೆ ಮಾಡಿ ಕೂಡ ಇದೇ ರೀತಿಯ ಬೆದರಿಕೆ ಹಾಕಿದ್ದಾರೆ ಎಂದು ನವನೀತ್ ಆರೋಪಿಸಿದ್ದಾರೆ.
ಮುಕೇಶ್​ ಅಂಬಾನಿಯವರ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಝೆಯವರನ್ನು ಅಮಾನತು ಮಾಡಿದ್ದರ ಬಗ್ಗೆ ನವನೀತ್​ ಕೌರ್ ರಾಣಾ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದರು. ಅಷ್ಟೇ ಅಲ್ಲ, ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್​ ಸಿಂಗ್ ಮಾಡಿರುವ ಭ್ರಷ್ಟಾಚಾರ ಆರೋಪದ ಅನ್ವಯ ಉದ್ಧವ್​ ಠಾಕ್ರೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದೂ ಒತ್ತಾಯಿಸಿದ್ದರು.
ನಾನು ಬೆದರಿಕೆ ಹಾಕಿಲ್ಲ:
ನಾನು ನನ್ನ ಜೀವನದಲ್ಲೇ ಯಾರಿಗೂ ಬೆದರಿಕೆ ಹಾಕಿಲ್ಲ. ಹಾಗಿರುವಾಗ ಒಬ್ಬ ಮಹಿಳೆಗೆ ಬೆದರಿಕೆ ಹಾಕುವುದೆಲ್ಲ ದೂರದ ಮಾತು ಎಂದು ಒಂದು ವಿಡಿಯೋ ಮೆಸೇಜ್​ ಹರಿಬಿಟ್ಟಿದ್ದಾರೆ. ಕೆಲವರು ವಿಚಾರಗಳನ್ನು ತಿರುಚುವುದರಲ್ಲಿ ನಿಸ್ಸೀಮರು. ಅದನ್ನು ರಾಣಾ ಕೂಡ ಮಾಡುತ್ತಾರೆ. 2019ರಲ್ಲಿ ನವನೀತ್​ ವಿರುದ್ಧ ಶಿವಸೇನೆಯ ಆನಂದ್​ರಾವ್​ ಅಡ್ಸೂ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿದ್ದರು. ಅದೇ ಕೋಪದಲ್ಲಿ ನಮ್ಮ ಪಕ್ಷದ ವಿರುದ್ಧ ಅವರು ಆರೋಪ ಮಾಡಿದ್ದಾರೆ ಎಂದು ಅರವಿಂದ್ ಸಾವಂತ್​ ಹೇಳಿದ್ದಾರೆ.
ಆದರೆ ಸಿಂಧುಧುರ್ಗ್​ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅರವಿಂದ್ ಸಾವಂತ್​, ಹಾಗೊಮ್ಮೆ ಇನ್ನೆಲ್ಲಿಂದಲಾದರೂ ಬೆದರಿಕೆ ಕರೆಗಳು ನವನೀತ್​ ಅವರಿಗೆ ಬರುತ್ತಿದ್ದರೆ, ಅವರ ಸಹಾಯಕ್ಕೆ ನಾನು ನಿಲ್ಲುತ್ತೇನೆ ಎಂದೂ ಅವರು ಹೇಳಿದ್ದಾರೆ.
ಆಸಿಡ್ ಅಟ್ಯಾಕ್​ ಬೆದರಿಕೆ ಹಾಕುವುದು ಅಕ್ಷಮ್ಯ ಅಪರಾಧ. ಅದನ್ನು ಯಾರೇ ಮಾಡಿರಲಿ ನಾನು ವಿರೋಧಿಸುತ್ತೇನೆ. ಈ ವಿಚಾರದಲ್ಲಿ ನವನೀತ್​ ಕೌರ್​ ರಾಣಾ ಬೆಂಬಲಕ್ಕೆ ನಿಲ್ಲುತ್ತೇನೆ ಎಂದಿದ್ದಾರೆ.

ಪ್ರಮುಖ ಸುದ್ದಿ :-   ಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement