ಕ್ಷೇತ್ರಗಳ ಪುನರ್ ವಿಂಗಡಣೆ ಮಾನದಂಡಗಳ ಪರಿಷ್ಕರಣೆ: ಬೊಮ್ಮಾಯಿ

ಬೆಂಗಳೂರು- ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಕ್ಷೇತ್ರ ವಿಂಗಡಣೆ ವೈಜ್ಞಾನಿಕವಾಗಿ ನಡೆದಿಲ್ಲ.  ಹೀಗಾಗಿ  ಕ್ಷೇತ್ರಗಳ  ವಿಂಗಡಣೆಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಗುರುವಾರ ಬೆಂಗಳೂರಿನಲ್ಲಿ ಸರ್ವ ಪಕ್ಷಗಳ ಮುಖಂಡರ ಸಭೆ ನಡೆಸುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಬಿಜೆಪಿಯ ಸುನೀಲ್‌ಕುಮಾರ್ ಈ  ವಿಷಯ ಪ್ರಸ್ತಾಪಿಸಿದರು.
ರಾಜ್ಯದಲ್ಲಿ ಈಗ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಗಳಿಗೆ ಶೀಘ್ರದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಕ್ಷೇತ್ರಗಳ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ನಡೆದಿದೆ. ಆದರೆ ಈ ಕಾರ್ಯ ವೈಜ್ಞಾನಿಕವಾಗಿ ನಡೆದಿಲ್ಲ. ಮಲೆನಾಡು ಭಾಗದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಹಾಲಿ‌ ನಿಯಮಗಳ ಪ್ರಕಾರ ನಡೆದರೆ ತೊಂದರೆಯಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಹೊಸ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುನಿಲಕುಮಾರ ಹೇಳಿದರು.
ಇದಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವ ಬಸವರಾಜ ಬೊಮ್ಮಾಯಿ ಅವರು, ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯವನ್ನು ರಾಜ್ಯ ಚುನಾವಣಾ ಆಯೋಗ ಕೈಗೆತ್ತಿಕೊಂಡಿದೆ. ಈಗ ನಡೆದಿರುವ ಪುನರ್ ವಿಂಗಡಣೆ ನಿಯಮಗಳು ಸರಿಯೋ, ತಪ್ಪೋ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ರೂಪಿಸಿ ಚುನಾವಣಾ ಆಯೋಗಕ್ಕೆ ನೀಡೋಣ  ಎಂದು ಅವರು ಹೇಳಿದರು.
ಈಗಿನ ನಿಯಮಗಳ ಪ್ರಕಾರದ ಮಾರ್ಗಸೂಚಿಗಳು ಸರಿಯಿಲ್ಲ. ಇದರಿಂದ ಹಲವೆಡೆ ಜಿ.ಪಂ. ಕ್ಷೇತ್ರಗಳು ಹೆಚ್ಚಾಗುತ್ತವೆ. ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳು ಕಡಿಮೆಯಾಗುತ್ತವೆ. ಇದರಿಂದ ಗೊಂದಲಗಳು ಸೃಷ್ಠಿಯಾಗುತ್ತವೆ. ಹಾಗಾಗಿ  ಮಾರ್ಗಸೂಚಿಗಳ ಪರಿಷ್ಕರಣೆ ಅಗತ್ಯವಿದೆ. ಪರಿಷ್ಕೃತ ಮಾರ್ಗಸೂಚಿಗಳನ್ನು ರೂಪಿಸಿ ಅದರ ಮೇಲೆ ಸದನದಲ್ಲಿ ಚರ್ಚೆ ನಡೆಸಿ ಅದನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿ, ಪರಿಷ್ಕೃತ ಮಾರ್ಗಸೂಚಿಗಳಂತೆ ಪುನರ್ ವಿಂಗಡಣೆಯಾಗಲಿ ಎಂದು ಹಲವು ಸದಸ್ಯರು ಮನವಿ ಮಾಡಿದರು.
ಇದಕ್ಕೆ ಸಮ್ಮತಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದೇ ಗುರುವಾರ (ಮಾ.೨೫) ವಿರೋಧ ಪಕ್ಷದ ನಾಯಕರುಗಳ ಸಭೆ ಕರೆದು ಪರಿಷ್ಕೃತ ಮಾರ್ಗಸೂಚಿಯನ್ನು ರೂಪಿಸುವ ಸಂಬಂಧ ಚರ್ಚೆ ನಡೆಸುವುದಾಗಿ ಹೇಳಿದರು. ಈ ಸಭೆಗೆ ಆಸಕ್ತ ಶಾಸಕರಿಗೆ ಆಹ್ವಾನ ಇದೆ ಎಂದು ಸಚಿವರು ಹೇಳಿದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 30 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement