ಟಿಕಾಯತ್‌ ಮೇಲಿನ ಪ್ರಕರಣ ಹಿಂಪಡೆಯಲು ಒತ್ತಾಯಿಸಿ ಗೃಹ ಸಚಿವ ಬೊಮ್ಮಾಯಿಗೆ ಪತ್ರ

ಮೈಸೂರು: ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್ ಟಿಕಾಯತ್ ಅವರ ವಿರುದ್ಧ ಶಿವಮೊಗ್ಗದ ಕೋಟೆ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ಹಾಗೂ ರಾಜ್ಯದ ಇತರೆ ಯಾವುದೇ ಠಾಣೆಗಳಲ್ಲಿ ದಾಖಲಿಸಿರುವ ಕೇಸುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ರೈತ ಸಂಘಟನೆಗಳ ಪ್ರಮುಖರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಪತ್ರ ಬರೆದು ಒತ್ತಾಯಿಸಿದ್ದಾರೆ.
ರೈತ ಚಳವಳಿಯ ಪರವಾಗಿ ಚುಕ್ಕಿ ನಂಜುಡಸ್ವಾಮಿ, ಕೆ. ಟಿ. ಗಂಗಾಧರ್ ಸೇರಿದಂತೆ ಇತರರು ಬುಧವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗೆ ತಂದ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು ಮತ್ತು ಎಂಎಸ್‌ಪಿ ಶಾಸನ ಬದ್ಧಗೊಳಿಸಬೇಕೆಂಬ ಹಕ್ಕೋತ್ತಾಯದ ರೈತ ಚಳುವಳಿ ಅಂಗವಾಗಿ ಸಿವಮೊಗ್ಗದಲ್ಲಿಯೂ ರೈತ ಮಹಾಪಂಚಾಯತ್ ಆಯೋಜನೆಗೊಂಡಿತ್ತು. ಮಾರ್ಚ್ 20ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ನಡೆದ ರೈತ ಮಹಾಪಂಚಾಯತ್‌ನಲ್ಲಿ ರಾಕೇಶ್ ಟಿಕಾಯತ್ ಭಾಗವಹಿಸಿದ್ದರು.
ಅವರು ತಮ್ಮ ಭಾಷಣದಲ್ಲಿ “ರಾಜ್ಯದ ರೈತರು ಬೆಂಗಳೂರಿಗೆ ದಿಗ್ಭಂಧನ ಹಾಕಬೇಕು. ಟ್ರಾಕ್ಟರ್ ಗಳನ್ನೇ ಅಸ್ತ್ರವಾಗಿ ಬಳಸಬೇಕು” ಎಂದು ಹೇಳಿದ ಅಂಶವನ್ನು ಆಧರಿಸಿ ಐಪಿಸಿ ಕಲಂ 153 ರ ಅಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಈ ನಡೆ ದೇಶದ ವಾಕ್‌ಸ್ವಾತಂತ್ರದ ಹರಣದಂತೆ ಕಾಣುತ್ತಿದೆ. ಹೀಗಾಗಿ ಈ ಕೂಡಲೇ ಕರ್ನಾಟಕ ರಾಜ್ಯದಲ್ಲಿ ರಾಕೇಶ್ ಟಿಕಾಯತ್ ವಿರುದ್ಧ ದಾಖಲಿಸಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯಬೇಕೆಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement