ಸಂಸದೀಯ ವ್ಯವಸ್ಥೆ ಅಡಿ ಸಚಿವ ಸುಧಾಕರ ಮೇಲೆ ಕ್ರಮ: ಕಾಗೇರಿ

ಬೆಂಗಳೂರು: ಶಾಸಕರ ಕುರಿತಾಗಿ ಸಚಿವ ಡಾ.ಕೆ.ಸುಧಾಕರ್ ಅವರ ಮೇಲೆ ಸಂಸದೀಯ ವ್ಯವಸ್ಥೆ ಅಡಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಡಾ.ಕೆ.ಸುಧಾಕರ್ ಆಕ್ಷೇಪಾರ್ಹ ಹೇಳಿಕೆ ಸರಿಯಲ್ಲ. ಅದರ ಬಗ್ಗೆ ಅವರೇ ಸ್ಪಷ್ಟೀಕರಣ ಕೂಡಾ ಕೊಟ್ಟಿದ್ದಾರೆ. ಆದರೂ ಸಹ ಸಭಾಧ್ಯಕ್ಷನಾಗಿ ಸಂಸದೀಯ ವ್ಯವಸ್ಥೆ ಅಡಿಯಲ್ಲಿ ನಾನು ಏನು ಕ್ರಮ ತೆಗೆದುಕೊಳ್ಳಬೇಕೋ ಎಂಬುದನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಸದನವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಿಕೊಳ್ಳುವ ಮನಸ್ಥಿತಿಯಿಂದ ಹೊರಬರಬೇಕು. ಪ್ರತಿ ಪಕ್ಷದ ಪಾತ್ರ ಈ ಬಾರಿ ಅತ್ಯಂತ ನೋವು ತಂದಿದೆ. ಪ್ರತಿಪಕ್ಷವಾಗಿ ಆಡಳಿತ ಪಕ್ಷದ ಸಭಾನಾಯಕರಿಗೆ ಇರುವಷ್ಟೇ ಜವಾಬ್ದಾರಿ ಇರುತ್ತದೆ ಎಂದ ಅವರು ಸಂಸದೀಯ ವ್ಯವಸ್ಥೆಗೆ ಶಕ್ತಿ ಬರಬೇಕಾದರೆ ಪ್ರತಿಪಕ್ಷವೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.
ಅಧಿವೇಶನ ಮಾ.31ರ ವರೆಗೆ ನಡೆಯಬೇಕಿತ್ತು. ಪರಿಸ್ಥಿತಿ ಕಾರಣದಿಂದ ಅನಿವಾರ್ಯವಾಗಿ ಬುಧವಾರವೇ ಮುಗಿಸಬೇಕಾಯಿತು. 13 ದಿನ ಕಲಾಪ ನಡೆದಿದೆ, ಒಟ್ಟು 44 ಗಂಟೆಗಳ ಕಾಲ ಕಲಾಪ ನಡೆದಿದೆ. ನಡೆದ ಅಷ್ಟು ದಿನಗಳ ಕಾಲ ವ್ಯವಸ್ಥಿತವಾಗಿ ಕಲಾಪ ನಡೆದಿದೆ ಎಂದು ಸಭಾಧ್ಯಕ್ಷರು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
ಇತ್ತೀಚಿಗೆ ಮಂತ್ರಿಗಳು, ಶಾಸಕರು ನನ್ನ ಬಳಿ ಬಂದು ಅನುಪಸ್ಥಿತಿಗೆ ಕಾರಣಗಳನ್ನು ಕೊಟ್ಟು ಗೈರಾಗುವುದು ಹೆಚ್ಚಾಗುತ್ತಿದೆ. ಅನಿವಾರ್ಯ ಪರಿಸ್ಥಿತಿ ಇದ್ದಾಗ ಸರಿ, ಆದರೆ ಸಣ್ಣಪುಟ್ಟ ಕಾರಣಗಳಿಗೆ ಕಾರಣ ನೀಡಿ ಗೈರಾಗಬಾರದು ಎಂದು ಸದಸ್ಯರಿಗೆ ಕಾಗೇರಿ ಕಿವಿಮಾತು ಹೇಳಿದರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement