ತಕ್ಷಣವೇ ಜಾರಕಿಹೊಳಿ ಬಂಧಿಸಿ, ಇಲ್ಲದಿದ್ರೆ ಹೈಕೋರ್ಟಿಗೆ ಹೋಗ್ತೀವಿ..

 

ಬೆಂಗಳೂರು: ಸಿಡಿ ಯುವತಿ ಹೇಳಿಕೆ ಆಧರಿಸಿ ನಾನು ದೂರು ನೀಡಿದ್ದೇನೆ.  ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಬಂಧಿಸಬೇಕು. ಬಂಧಿಸದಿದ್ದರೆ, ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಸಂತ್ರಸ್ತೆ ಪರ ವಕೀಲ ಜಗದೀಶ್ ಆಗ್ರಹಿಸಿದ್ದಾರೆ.
ಮಾಧ್ಯಮಗಳ ಮೂಲಕ ಜಾರಕಿಹೊಳಿ ಹೆದರಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದೆ. ಸಾಮಾನ್ಯ ವ್ಯಕ್ತಿ ವಿರುದ್ಧ ಈ ಪ್ರಕರಣ ದಾಖಲಾಗಿದ್ದರೆ ಪೊಲೀಸರು ಇಷ್ಟರಲ್ಲೇ ಆ ವ್ಯಕ್ತಿಯನ್ನು ಬಂಧಿಸುತ್ತಿದ್ದರು. ಆದರೆ, ರಮೇಶ ಜಾರಕಿಹೊಳಿ ಅವರನ್ನು ಯಾಕೆ ಬಂಧಿಸಿಲ್ಲ? ಸಾಮಾನ್ಯರಿಗೆ ಒಂದು ನ್ಯಾಯ. ಇವರಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಜಾರಕಿಹೊಳಿ ಅವರನ್ನು ಬಂಧಿಸದಿದ್ದರೆ, ಹೈಕೋರ್ಟ್ ಮೊರೆ ಹೋಗುತ್ತೇವೆ. ನ್ಯಾಯಾಲಯದ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆ ನಡೆಸುವಂತೆ ಕೋರುತ್ತೇವೆ ಎಂದು  ವಕೀಲ ಜಗದೀಶ ಹೇಳಿದ್ದಾರೆ.
ಕೈ ಬರಹದ ಲಿಖಿತ ದೂರನ್ನು ಸಂತ್ರಸ್ತೆ ಎನ್ನಲಾದ ಯುವತಿ ವಕೀಲ ಜಗದೀಶ್ ಅವರಿಗೆ ರವಾನಿಸಿದ್ದಳು. ಈ ಕುರಿತು ವಿಡಿಯೋದಲ್ಲಿ ಸಹ ವಕೀಲ ಜಗದೀಶ್ ಹೆಸರು ಉಲ್ಲೇಖಿಸಿದ್ದಳು. ಈ ಹಿನ್ನೆಲೆಯಲ್ಲಿ ವಕೀಲ ಜಗದೀಶ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಸಿಡಿ ರಹಸ್ಯ ಕುರಿತು ಸಂತ್ರಸ್ತೆ ಎನ್ನಲಾದ ಯುವತಿ ತನ್ನ ಪೋಷಕರೊಂದಿಗೆ ಮಾತನಾಡಿದ್ದಾಳೆ ಎನ್ನಲಾದ ಅಡಿಯೋ ಬಿಡುಗಡೆ ಆಗಿತ್ತು. ಅದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿತ್ತು. ಇದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದು, ಈಗ ಬೆಳಿಗ್ಗೆ ಯುವತಿಯದ್ದು ಎನ್ನಲಾದ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು, ಅವಳು ಅದರಲ್ಲಿ ತನ್ನ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೋರಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement