ಹಿರೆನ್‌ ಸಾವು: ಮಿಥಿ ನದಿ ಸೇತುವೆಗೆ ಸಚಿನ್ ವಾಝೆ ಕರೆತಂದ ಎನ್ಐಎ, ಕಂಪ್ಯೂಟರ್ ಸಿಪಿಯು, ವಾಹನ ಸಂಖ್ಯೆ ಪ್ಲೇಟ್ ಪತ್ತೆ

ಮುಂಬೈ; ಮನ್ಸುಖ್ ಹಿರೆನ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝೆಯನ್ನು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಮಿಥಿ ನದಿಯ ಸೇತುವೆಗೆ ಭಾನುವಾರ ಕರೆದೊಯ್ದರು.
ಈ ಸಂದರ್ಭದಲ್ಲಿ ಈಜುಪಟುಗಳು ಕಂಪ್ಯೂಟರ್ ಸಿಪಿಯು, ವಾಹನದ ನಂಬರ್ ಪ್ಲೇಟ್ ಮತ್ತು ಇತರ ವಸ್ತುಗಳನ್ನು ನದಿಯಿಂದ ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.
ಇದಕ್ಕೂ ಮುನ್ನ ಗುರುವಾರ, ಎನ್‌ಐಎ ವಾಝೆಯನ್ನು ಥಾಣೆಯ ರೇತಿ ಬಂದರ್ ಕ್ರೀಕ್‌ಗೆ ಕರೆದೊಯ್ದಿತ್ತು.ಅದು ಉದ್ಯಮಿ ಮನ್ಸುಖ್ ಹಿರೆನ್ ಶವ ಪತ್ತೆಯಾದ ಸ್ಥಳವಾಗಿದೆ. ಈಗ ಅಂಬಾನಿ ಬೆದರಿಕೆ ಪ್ರಕರಣದ ಜೊತೆಗೆ ಹಿರೆನ್ ಸಾವಿನ ವಿಷಯವನ್ನೂ ತನಿಖೆ ವಹಿಸಿಕೊಂಡಿರುವ ಎನ್ಐಎ ಈ ಬಗ್ಗೆ ಅನೇಕ ಮಾಹಿತಿಗಳನ್ನು ಕಲೆ ಹಾಕಿದೆ.
ಹಿರೆನ್ ಪ್ರಕರಣದಲ್ಲಿ ಅಮಾನತುಗೊಂಡ ಪೊಲೀಸ್ ವಿನಾಯಕ ಶಿಂಧೆ ಮತ್ತು ಕ್ರಿಕೆಟ್ ಬುಕ್ಕಿ ನರೇಶ್ ಗೌರ್ ಅವರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ (ಎಟಿಎಸ್) ಬುಧವಾರ ಎನ್ಐಎ ವಶಕ್ಕೆ ಪಡೆದಿದೆ.
ಫೆಬ್ರವರಿ 25 ರಂದು ದಕ್ಷಿಣ ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಪತ್ತೆಯಾದ ಜೆಲೆಟಿನ್ ಮತ್ತು ಬೆದರಿಕೆ ಪತ್ರಗಳೊಂದಿಗೆ ಇದ್ದ ಸ್ಕಾರ್ಪಿಯೋಗೆ ಸಂಬಂಧಿಸಿದಂತೆ ಮಾರ್ಚ್ 13 ರಂದು ವಾಝೆ ಅವರನ್ನು ಎನ್ಐಎ ಬಂಧಿಸಿತ್ತು.ಈ ಸ್ಕಾರ್ಪಿಯೋವನ್ನು ಒಂದು ವಾರದ ಹಿಂದೆ ತನ್ನ ಬಳಿಯಿಂದ ಕಳವು ಮಾಡಲಾಗಿದೆ ಎಂದು ಹಿರೆನ್ ಹೇಳಿಕೊಂಡಿದ್ದ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement