ಕಳೆದೊಂದು ವಾರದಿಂದ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಕಂಟೇನರ್ ಹಡಗು “ಎವರ್ ಗ್ರೀನ್” ಮತ್ತೆ ಚಲಿಸಲಾರಂಭಿಸಿದೆ ಎಂದು ವರದಿಯಾಗಿದೆ.
ಕಡಲ ಸೇವಾ ಪೂರೈಕೆದಾರ – ಇಂಚ್‌ಕೇಪ್ ಪ್ರಕಾರ, ಸೂಯೆಜ್ ಕಾಲುವೆಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ‘ಎವರ್ ಗ್ರೀನ್ʼ ಎಂಬ ದೈತ್ಯ ಹಡಗನ್ನು ರಕ್ಷಿಸಿಕೊಳ್ಳುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. ಈ ಸರಕು ಹಡಗು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಸಿಲುಕಿ ಮಾರ್ಗವನ್ನು ಬಂದ್ ಮಾಡಿತ್ತು.
400 ಮೀಟರ್ ಉದ್ದದ ‘ಎವರ್ ಗ್ರೀನ್’ ಅನ್ನು ಸೋಮವಾರ ಮುಂಜಾನೆ 4.30 ಕ್ಕೆ ಯಶಸ್ವಿಯಾಗಿ ಮತ್ತೆ ತೇಲಿಸಲಾಯಿತು. ಅಡೆತಡೆಯಿಂದಾಗಿ 450 ಕ್ಕೂ ಹೆಚ್ಚು ಹಡಗುಗಳು ಸೂಯೆಜ್ ಬಳಿ ಸಿಲುಕಿಕೊಂಡಿವೆ ಎಂದು ತಿಳಿದುಬಂದಿದೆ.
ಸೂಯೆಜ್ ಕಾಲುವೆ ಜಾಗತಿಕ ಕಡಲ ವ್ಯಾಪಾರದ 12% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಬೃಹತ್ ಕಂಟೇನರ್ ಹಡಗು ಸೂಯೆಜ್ ಕಾಲುವೆಯಲ್ಲಿ ಬಿರುಗಾಳಿಯ ಕಾರಣದಿಂದ ಅಡ್ಡ ಸಿಲುಕಿಕೊಂಡಿತ್ತು. ಇದರ ಪರಿಣಾಮವಾಗಿ ನಿರ್ಣಾಯಕ ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗದ ಎರಡೂ ತುದಿಯಲ್ಲಿ ಹಡಗುಗಳ ದೊಡ್ಡ ಸಂಚಾರ ದಟ್ಟಣೆ ಉಂಟಾಗಿತ್ತು. ವಿಶ್ವದ ಅತ್ಯಂತ ದಟ್ಟಣೆಯ ವ್ಯಾಪಾರ ಮಾರ್ಗಗಳಲ್ಲೊಂದಾದ ಸುಯೆಜ್ ಕಾಲುವೆಯಲ್ಲಿ ೨೦೨೦ರಲ್ಲಿ ೧.೧೭ ಕೋಟಿ ಟನ್ ಸಾಮಗ್ರಿ ಜಲಮಾರ್ಗದ ಮೂಲಕ ಸಾಗಣೆ ಮಾಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ