ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ: ಕೊ-ವಿನ್‌ ಪೋರ್ಟಲ್‌ ಸಾಮರ್ಥ್ಯ ಹೆಚ್ಚಳ

ನವ ದೆಹಲಿ: ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ನೋಂದಣಿಗೆಂದು ರೂಪಿಸಿರುವ ವೆಬ್​ಪೋರ್ಟಲ್ CoWIN ಸಾಮರ್ಥ್ಯ ಹೆಚ್ಚಿಸಲಾಗಿದೆ.
ಪ್ರತಿದಿನ ಒಂದು ಕೋಟಿ ನೋಂದಣಿ ದಾಖಲಿಸುವ ಸಾಮರ್ಥ್ಯ ಈಗ ಕೋವಿನ್ ವೆಬ್​ಪೋರ್ಟಲ್​ಗೆ ಬಂದಿದೆ. ಏಪ್ರಿಲ್ 1ರ ನಂತರ 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ನೋಂದಣಿಗೆ ಮುಂದಾಗುವವರ ಸಂಖ್ಯೆ ಹೆಚ್ಚಾಗಬಹುದು ಎಂದು ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಭಾರತದಲ್ಲಿ ನಿನ್ನೆಯವರೆಗೆ (ಮಾರ್ಚ್ 28) 6 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ವಿತರಿಸಲಾಗಿದೆ ಎಂದು ಪೋರ್ಟಲ್​ಮಾಹಿತಿ ನೀಡುತ್ತಿದೆ.
ಭಾರತವು ಶನಿವಾರ ಕೊವಿಡ್-19 ಲಸಿಕೆ ಪಡೆದವರ ಸಂಖ್ಯೆಯು 6 ಕೋಟಿ ದಾಟಿದೆ. ಶನಿವಾರ ಒಂದೇ ದಿನ 21,54,170 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೆ ದೇಶದಲ್ಲಿ ಲಸಿಕೆ ತೆಗೆದುಕೊಂಡವರ ಒಟ್ಟು ಸಂಖ್ಯೆ 6,01,22,911ಕ್ಕೆ ತಲುಪಿದೆ.
ದೇಶದಾದ್ಯಂತ 5,17,17,688 ಮಂದಿ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಕೊರೊನಾ ಸೋಂಕು ಹೆಚ್ಚಿರುವ ಮಹಾರಾಷ್ಟ್ರದಲ್ಲಿಯೇ ಹೆಚ್ಚಿನ ಪ್ರಮಾಣದ ಕೊವಿಡ್-19 ಲಸಿಕೆಗಳನ್ನು ವಿತರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 57,26,036 ಮಂದಿಗೆ ಲಸಿಕೆ ನೀಡಲಾಗಿದೆ. ಕೋವಿನ್ ಪೋರ್ಟಲ್​ಗೆ ಈವರೆಗೆ ಒಟ್ಟು 6,15,31,438 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಏಪ್ರಿಲ್ 1ರಿಂದ 45 ವರ್ಷ ಮತ್ತು ಮೇಲ್ಪಟ್ಟ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ಈ ಕುರಿತು ಇನ್ನೂ ಹೆಚ್ಚಿನ ವಿವರ ತಿಳಿದುಬರಬೇಕಿದ್ದು, ಕೇಂದ್ರ ಸರ್ಕಾರ ಮಾರ್ಚ್ 23ರಂದು ಪ್ರಕಟಿಸಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಮಣಿಪುರ | ಸರ್ಕಾರ ರಚಿಸಲು 44 ಶಾಸಕರು ಸಿದ್ಧ ; ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕನ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement