(ಧಾರವಾಡದ ಎಮ್ಮಿಕೆರಿಯಲ್ಲಿರುವ ಶ್ರೀ ಸದ್ಗುರು ರಮಣ ಚಿದಂಬರ ಆಶ್ರಮದ ವತಿಯಿಂದ ಸಂತ ಶ್ರೇಷ್ಠ ದಾಸ ರಾಜರಾಮರ ೨೫೨ ಜನ್ಮೋತ್ಸವವನ್ನು ಮಾ.೩೦ ರಂದು ಎಮ್ಮಿಕೇರಿ, ಕೆಳಕರ ಹನುಮಂತ ಗುಡಿ ಹತ್ತಿರ, ರಘೋತ್ತಮದಾಸ ಮಂಟಪದಲ್ಲಿ ಆಚರಿಸಲಾಗುತ್ತಿದ್ದು, ಈನಿಮಿತ್ತ ಲೇಖನ)
ಶ್ರೀ ಶಿವ ಚಿದಂಬರ ಭಕ್ತ ಪರಂಪರೆ, ರಜಪೂತ ವಂಶದೊಳಗಿನ ಮಹಾನ್ ಭಗವದ್ಭಕ್ತ ಹರಿಸಿಂಗ್ ಮತ್ತು ಲಕ್ಷ್ಮೀಬಾಯಿ ಅವರ ಪುತ್ರರಾದ ರಾಜರಾಮರು ೧೭೬೯ ರಲ್ಲಿ ಮಹಾರಾಷ್ಟ್ರದ ಬಾಬೂಳಗಾಂವದಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ರಾಜರಾಮರ ಒಲವು ದೈವಭಕ್ತಿಯ ಕಡೆಗೆ ಇತ್ತು. ಬಾಬೂಳಗಾಂವದಲ್ಲಿ ಬಾಬುಳೇಶ್ವರ ಮಂದಿರವಿದೆ. ಅಲ್ಲಿ ಹರಿಸಿಂಗರ ಗುರು ದ್ವಾರಕಾದಾಸರು ಇರುತ್ತಿದ್ದರು. ಅವರಿಂದ ಅನೇಕ ಭಕ್ತ ಚರಿತ್ರೆ ಕೇಳುವುದರಲ್ಲಿ ರಾಜರಾಮರು ಮಗ್ನನಾಗುತ್ತಿದ್ದರು. ಒಮ್ಮೆ ಭಾಗವತದೊಳಗಿನ ದ್ರವಾಖ್ಯಾನವನ್ನು ಅವರು ಕೇಳಿದರು. ಅದರಿಂದ ಅವರ ಮನಸ್ಸು ಬಹಳ ವಿಚಲವಾಯಿತು. ಐದು ವರ್ಷದ ಬಾಲಕ ಧ್ರುವನಿಗೆ ಪರಮೇಶ್ವರ ಸಗುಣರೂಪ ದರ್ಶನವಾಯಿತು. ಎಂದ ಮೇಲೆ ಎಂಟು ವರ್ಷ ಮಿಕ್ಕಿದರೂ ತನಗೆ ದೇವ ದರ್ಶನವೇಕೆ ಆಗಲಿಲ್ಲ ಎಂಬ ತಳಮಳವು ಒಂದೇ ಸಮನೆ ಕಾಡತೊಡಗಿತು. ಅವರು ದ್ವಾರಕದಾಸರ ಮುಂದೆ ತಮ್ಮ ತಳಮಳ ವ್ಯಕ್ತಪಡಿಸಿದರು. ಆಗ ದ್ವಾರಕದಾಸರು ನಿನಗೆ ಸಗುಣಾವರಾತ ಚಿದಂಬರರ ದರ್ಶನವಾಗಿ ನೀನು ಕೃತಾರ್ಥನಾಗುವಿ ಎಂದು ತಿಳಿಸಿದರು.
ರಾಜರಾಮರು ಭಗವಾನ ಚಿದಂಬರರ ಮೇಲೆ ೧,೫೧,೪೯೧ ಅಭಂಗಗಳನ್ನು, ೫೦೦ ಅವತಾರ ಮಾಲಿಕಾ ಅಭಂಗಗಳನ್ನು, ೨೭ ವರದ ಅಭಂಗಗಳನ್ನು ರಚಿಸಿದ್ದಾರೆ. ಅವರು ಚಿದಂಬರ ವಾಙ್ಮಯ ಇತರ ಸೇವೆಯನ್ನೂ ಮಾಡುತ್ತಾ, ಚಿದಂಬರರ ಪಾದುಕೆಗಳನ್ನು ಎದೆಗವಚಿಕೊಂಡು ತೀರ್ಥಯಾತ್ರೆ ಮಾಡಿದ್ದಾರೆ. ಮುರಗೊಡ, ಕೆಂಗೇರಿ, ಬೆಳಗಾಂವಿಯ ಶಹಪೂರ ಮುಂತಾದ ಪ್ರದೇಶಗಳಲ್ಲಿ ಸಂಚರಿಸಿ, ೧೮೪೨ ರಲ್ಲಿ ದೇಹತ್ಯಾಗ ಮಾಡಿದರು. ಸಾವಿರಾರು ಭಕ್ತರು ಅವರ ಪರಂಪರೆಯನ್ನು ಇಂದಿಗೂ ಮುಂದುವರೆಸಿದ್ದಾರೆ.
ಪರಮೇಶ್ವರನ ಪ್ರಾಪ್ತಿಯ ಸಾಧನೆ ಸಾಗಿರುವಾಗಲೇ ಅವರ ಮದುವೆಯಾಯಿತು. ಪ್ರಪಂಚದ ಹೊಣೆಗಾರಿಕೆಯನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಅವರು ಬಾಬುಳಗಾಂವ ಬಿಟ್ಟು ಹೊರಟರು. ಸಂಸ್ಥಾನವೊಂದರಲ್ಲಿ ಐದು ನೂರು ಕುದುರೆ ದಳದ ರಿಸಾಲದಾರ ಎಂಬ ಅಧಿಕಾರಿಯಾದರು. ಭಗವಂತನ ಸಾಕ್ಷಾತ್ಕಾರಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಕಾಶಿಯಾತ್ರೆಗೆ ಹೋಗುವ ಯೋಚನೆಯಲ್ಲಿದ್ದ ಇವರಿಗೆ ಅಕಸ್ಮಾತ್ತಾಗಿ ಕೃಷ್ಣಭಟ್ಟರ ಭೆಟ್ಟಿಯಾಯಿತು. ಅವರ ಮುಖದಿಂದ ಸಾಕ್ಷತ್ ಪರಮೇಶ್ವರನೇ ಚಿದಂಬರ ರೂಪದಲ್ಲಿ ಲೀಲೆಗಳನ್ನು ತೋರಿಸುತ್ತಿರುವ ಸಂಗತಿ ತಿಳಿಸಿದರು. ದ್ವಾರಕದಾಸರು ನುಡಿದುದು
ಸತ್ಯವಾಗುವುದು, ಆದರೆ ಚಿದಂಬರರ ದರ್ಶನ ಎಂದಾಗುವದೋ ಎಂದು ಮನಸ್ಸು ಉತ್ಕಂಠಿತವಾಗಿ ಕೂಡಲೇ ಅವರು ಮುರಗೋಡಕ್ಕೆ ಹೋಗತಕ್ಕದ್ದೆಂದು ನಿಶ್ಚಯಿಸಿದರು. ಕೆಲಸಕ್ಕೆ ರಾಜಿನಾಮೆ ನೀಡಿದರು. ಗುರುಬಂಧು ನಿಂಬಾಜಿಯೊಂದಿಗೆ ಮಾರ್ಗಕ್ರಮಣ ಪ್ರಾರಂಭಿಸಿದರು. ಚಿದಂಬರರ ವಾಸವು ಮುರಗೋಡದಲ್ಲಿಲ್ಲದೆ, ಕುಂದಗೋಳದಲ್ಲಿದೆ ಎಂದು ತಿಳಿದ ಮೇಲೆ ಅಲ್ಲಲ್ಲಿ ತಂಗುತ್ತಾ, ಕುಂದಗೋಳಕ್ಕೆ ಬಂದು ಮಹಾಸ್ವಾಮಿಯ ದರ್ಶನ ಪಡೆದರು.
ಗುಣ, ಶಕ್ತಿ ಮತ್ತು ದೈವತ್ವವನ್ನು ವರ್ಣಿಸಿದ ವರ ಪ್ರಸಾದವಾದ ಸಾಹಿತ್ಯವನ್ನು ಅಭಂಗರೂಪದಲ್ಲಿ ಸಂತ ಶ್ರೇಷ್ಠರಾದ ದಾಸ ರಾಜಾರಾಮ ಮಹಾರಾಜರ ಸಾಹಿತ್ಯವನ್ನು ಗಾಥಾ ಗಳೆಂದು ಕರೆಯುವರು. ಹರಿದಾಸರಾದ ನಾರದ ಮಹರ್ಷಿಗಳಿಂದ ವ್ಯಾಸರು ರಚಿಸಿದ ಸಾಹಿತ್ಯವನ್ನು (ಗಾಥಾ ರೂಪದಲ್ಲಿ) ಪ್ರಪ್ರಥಮವಾಗಿ ಆರಾಧಿಸಿದರು. ಕಾಲಾಂತರದಲ್ಲಿ ವಾರ್ಕರಿ ಸಂಪ್ರದಾಯವನ್ನು ಸಾದರ ಪಡಿಸಿದ ಶ್ರೇಷ್ಠರಾದ ತುಕಾರಾಮ ಮಹಾರಾಜ, ನಾಮದೇವ ಮತ್ತು ವಿಷ್ಣು ಅವರಾತಿಗಳಾದ ಸಂಗ ಜ್ಞಾನದೇವ ರಚಿಸಿದ ಸಾಹಿತ್ಯವು ಗಾಥಾಗಳೆಂದು ಕರೆಯಲ್ಪಡುವವು. ಈ ಸಂಪ್ರದಾಯದಲ್ಲಿ ಗಾಥಾ ಪೂಜೆಯೇ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಪಾಂಡುರಂಗನ ಅವತಾರವೆಂದೇ ಕರೆಯಲ್ಪಡುವ ಶ್ರೀ ಚಿದಂಬರ ಮಹಾಸ್ವಾಮಿಗಳ ಕುರಿತಾದ ಸಾಹಿತ್ಯವನ್ನು ಗಾಥಾ ರೂಪದಲ್ಲಿ ದಾಸ ರಾಜಾರಾಮ, ಸಂತ ವಿಠಾಬಾಯಿ, ಶ್ರೀ ಅಪ್ಪು ನಾನಾ ಗರ್ದೆ ಮತ್ತು ಚಿದಂಬರ ಭಕ್ತರಾದ ಅವಧಾನಿ ಹನುಮಂತಾಚಾರ್ಯ ಹಾಗೂ ಶಿವಶಾಸ್ತ್ರಿ ರಚಿಸಿದ್ದಾರೆ. ಇವುಗಳ ಪೂಜೆಯೇ ಗಾಥಾ ಪೂಜಾ.
ಚಿದಂಬರ ಹ. ಕುಲಕರ್ಣಿ, ಉದಯ ಹ. ಕುಲಕರ್ಣಿ, ರಾಜಣ್ಣ ಕಾಗವಾಡ, ಶ್ರೀಧರ ಜೋಷಿ, ಜಗನ್ನಾಥ ರ. ಕುಲಕರ್ಣಿ, ಕೃಷ್ಣ ಶೇಗುಣಸಿ, ರವಿ ಹುದ್ದಾರ, ಮುರಲೀಧರ ಎಚ್. ಶ್ರೀಕಾಂತ ಪಾಚಲಗ, ಭಾಸುರಾನಂದ, ಪಂಡಿತ ವಾಮನ, ವಿಶ್ವನಾಥ, ಪೂರ್ಣಾನಂದ, ಪ್ರತಿಭಾ ಮಾ. ಕುಲಕರ್ಣಿ, ರಾಧಾ ರ. ಕುಲಕರ್ಣಿ, ತೇಜಾ ಕುಲಕರ್ಣಿ, ದಿವ್ಯಾ ಕುಲಕರ್ಣಿ, ವಾಣಿ ಎಂ. ಕುಲಕರ್ಣಿ, ವೀಣಾ ಪಾಚಲಗದ, ಶ್ರೀದೇವಿ ಜಗನ್ನಾಥ ಕುಲಕರ್ಣಿ ಮುಂತಾದ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮುಂಜಾನೆ ಆರತಿ, ೧೨.೦೦ ತೋಟ್ಟಿಲೋತ್ಸವ, ೧.೦೦ ಗಾಥಾ ಕಾರ್ಯಕ್ರಮಗಳು ಜರುಗಲಿದ್ದು, ಸಂತ ಶ್ರೇಷ್ಠರಾದ ದಾಸ ರಾಜರಾಮರ ಅವರ ಕೃಪಾರ್ಶಿವಾದ ಪಡೆದು ಕೊಳ್ಳಲು ಸಂಘಟಿಕರು ವಿನಂತಿಸಿದ್ದಾರೆ.
-ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು


ನಿಮ್ಮ ಕಾಮೆಂಟ್ ಬರೆಯಿರಿ