ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನರಾರಂಭ: ಇಂದು ಪಾಕಿಸ್ತಾನ್‌ ಕ್ಯಾಬಿನೆಟ್‌ ಸಮಿತಿ ಸಭೆ

ಭಾರತದೊಂದಿಗಿನ ಸಂಬಂಧಗಳ ಪುನರುಜ್ಜೀವನಕ್ಕೆ ಯತ್ನಿಸುವ ಪಾಕಿಸ್ತಾನದ ಮೊದಲ ಪ್ರಮುಖ ಹೆಜ್ಜೆಯಾಗಿ ಪಾಕಿಸ್ತಾನ ಸರ್ಕಾರ ಬುಧವಾರ ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನು ಪುನರಾರಂಭಿಸುವುದನ್ನು ಪರಿಗಣಿಸಲಿದೆ ಎಂದು ಹೇಳಲಾಗಿದೆ.
ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳುವ ಬಗ್ಗೆ ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ತೀರ್ಮಾನಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಮಿತಿ ಸಭೆ ಪಾಕಿಸ್ತಾನದ ಸಮಯ ಬೆಳಿಗ್ಗೆ 11.30 ಕ್ಕೆ ನಿಗದಿಯಾಗಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ 370 ನೇ ವಿಧಿ ರದ್ದುಪಡಿಸಿದ ನಂತರ ಮತ್ತು ರಾಜ್ಯವನ್ನು ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಪಾಕಿಸ್ತಾನವು ಭಾರತದೊಂದಿಗಿನ ಸಂಬಂಧವನ್ನು ಕಡಿದುಕೊಂಡಿತ್ತು.
ಏತನ್ಮಧ್ಯೆ, ಪಾಕಿಸ್ತಾನದ ರಾಷ್ಟ್ರೀಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಪತ್ರಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ತಮ್ಮ ದೇಶವು ಭಾರತ ಸೇರಿದಂತೆ ತನ್ನ ನೆರೆಹೊರೆಯವರೊಂದಿಗೆ ಶಾಂತಿ ಬಯಸಿದೆ ಎಂದು ಹೇಳಿದ್ದಾರೆ, ಇದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ಎಲ್ಲಾ ಬಾಕಿ ಉಳಿದಿರುವ ಸಮಸ್ಯೆಗಳು ಪರಿಹರಿಸಬೇಕಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಪಾಕಿಸ್ತಾನದ ಜನರು ಭಾರತ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ಶಾಂತಿಯುತ, ಸಹಕಾರಿ ಸಂಬಂಧ ಬಯಸುತ್ತಾರೆ” ಮತ್ತು “ಭಾರತ ಮತ್ತು ಪಾಕಿಸ್ತಾನದ ನಡುವಿನ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ವರೆಗೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಅನಿಶ್ಚಿತವಾಗಿದೆ ಎಂದು ನಮಗೆ ಮನವರಿಕೆಯಾಗಿದೆ, ಅದರಲ್ಲಿಯೂ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ರಚನಾತ್ಮಕ ಮತ್ತು ಫಲಿತಾಂಶ-ಆಧಾರಿತ ಸಂವಾದಕ್ಕೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಒಂದು ತಿಂಗಳ ಹಿಂದೆ, ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳು ಎರಡೂ ದೇಶಗಳು “ಎಲ್ಲಾ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿದ್ದೇವೆ ಎಂದು ಘೋಷಿಸಿದ್ದವು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement