ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: 3 ಟಿ ಸೂತ್ರ ಪಾಲನೆಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ..!

ಬೆಂಗಳೂರು: ರಾಜ್ಯದಲ್ಲಿ ಕೊರೋನಾಸೋಂಕು ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘3 ಟಿ’ (ಟೆಸ್ಟ್-ಟ್ರ್ಯಾಕ್-ಟ್ರೀಟ್) ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಈ ಬಗ್ಗೆ ಬುಧವಾರ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಐದು ತಿಂಗಳಿಂದ ಕೊರೋನಾ ಪ್ರಕರಣ ಇಳಿಮುಖಗೊಂಡಿತ್ತು. ಆದರೆ, ಕೆಲವೆಡೆ ಕೆಲದಿನಗಳಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಮಾ.23ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಏ.1 ರಿಂದ ಏ.30ರ ವರೆಗೆ ವೈರಾಣು ಜಾಡು ಪತ್ತೆ, ಪರೀಕ್ಷೆ ಹೆಚ್ಚಳ, ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದ ಹಾಗೂ ಹೆಚ್ಚು ಪ್ರಕರಣಗಳು ವರದಿಯಾಗಿರುವ ಪ್ರದೇಶವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಘೋಷನಡ ಮಾಡುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದಾರೆ.
ಮಾಸ್ಕ್ ಧರಿಸುವುದು , ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಬೇಕು. ಮಾಸ್ಕ್ ಧರಿಸದಿದ್ದರೆ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 250 ರೂ. ಹಾಗೂ ಇತರೆ ಪ್ರದೇಶದಲ್ಲಿ 100 ರೂ.ದಂಡ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು. ಸಾರ್ವಜನಿಕವಾಗಿ ಉಗುಳುವುದಕ್ಕೂ ಆಯಾ ಸ್ಥಳೀಯ ಪ್ರಾಧಿಕಾರದ ನಿಯಮದಂತೆ ದಂಡ ವಿಧಿಸಬೇಕು.ಕಂಟೈನ್ಮೆಂಟ್ ವಲಯಗಳಿಂದ ಜನರ ಬೇಕಾಬಿಟ್ಟಿ ಸಂಚಾರಕ್ಕೆ ಅವಕಾಶ ನೀಡಬಾರದು. ಕಂಟೈನ್ಮೆಂಟ್ ವಲಯಗಳಲ್ಲಿ ಅಗತ್ಯ ಚಟುವಟಿಕೆಗೆ ಮಾತ್ರ ಅವಕಾಶ ನೀಡಬೇಕು. ಅಗತ್ಯ ಸರಕು-ಸೇವೆ ಹಾಗೂ ತುರ್ತು ಸೇವೆಗೆ ಮಾತ್ರ ಅವಕಾಶ ಒದಗಿಸಬೇಕು. ಕಣ್ಗಾವಲು ತಂಡ ರಚನೆ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ನಿಗದಿತ ನಿಯಮಾವಳಿ ಪ್ರಕಾರ ಕೊರೋನಾ ಪರೀಕ್ಷೆ ಮಾಡಬೇಕು. ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಿ 14 ದಿನಗಳ ಕಾಲ ನಿಗಾ ವಹಿಸಬೇಕು. ಸೋಂಕಿತರ ಶೇ.80ರಷ್ಟು ಸಂಪರ್ಕಗಳನ್ನು 72 ಗಂಟೆಗೊಳಗೆ ಪತ್ತೆ ಹಚ್ಚಬೇಕು. ಕಂಟೈನ್ಮೆಂಟ್ ಝೋನ್ ಗಳಲ್ಲಿ ನಿಯಮ ಪಾಲನೆ ಮಾಡದೆ ಹೋದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡುವುದು. ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆ, ದುರ್ಬಲ ವ್ಯಕ್ತಿಗಳ ರಕ್ಷಣೆ, ಆರೋಗ್ಯ ಸೇತು ಬಳಕೆ ಹಾಗೂ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಆದ್ಯತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣ ಹೆಚ್ಚಿರುವ ತಾಲೂಕು, ವಾರ್ಡ್ ಗಳಲ್ಲಿ ಕೊರೋನಾ ಪರೀಕ್ಷೆ ಹೆಚ್ಚಾಗಿ ಮಾಡಬೇಕು. ಈ ಪೈಕಿ ಶೇ.70ರಷ್ಟು ಆರ್’ಟಿ-ಪಿಸಿಆರ್ ಪರೀಕ್ಷೆಯನ್ನೇ ಮಾಡಬೇಕು. ಸೋಂಕಿತರ ಐಸೋಲೇಷನ್ ಮಾಡಬೇಕು. ಚಿಕಿತ್ಸೆಗೆ ಅಗತ್ಯ ವೈದ್ಯಕೀಯ ಸೌಲಭ್ಯ, ಸಲಕರಣೆಗಳ ಬಗ್ಗೆ ಸ್ಥಳೀಯ ಆಡಳಿತಗಳು ಖಚಿತಪಡಿಸಿಕೊಳ್ಳಬೇಕೆಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement