‘ಸಂಘಕಾರ್ಯ’ವನ್ನು ‘ಜೀವನಕಾರ್ಯ’ವನ್ನಾಗಿ ಸ್ವೀಕರಿಸಿದ್ದ ಸಿದ್ದಣ್ಣಗೌಡ ಗಡಿಗುಡಾಳರು

ಕರ್ನಾಟಕ ಉತ್ತರ ಪ್ರಾಂತದ ಹಿಂದಿನ ಪ್ರಾಂತ ಸಂಘಚಾಲಕರಾಗಿದ್ದ ಸಿದ್ದಣ್ಣಗೌಡ ಗಡಿಗುಡಾಳರು ಏಪ್ರಿಲ್‌ ೧ರಂದು ಗುರುವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ೨ಕ್ಕೆ ಬಳ್ಳಾರಿ ಜಿಲ್ಲೆಯ ಅವರ ಸ್ವಗ್ರಾಮ ಗಡಿಗುಡಾಳದಲ್ಲಿ ನಡೆಯಿತು.

ಮಾ.ಶ್ರೀ ಸಿದ್ದಣ್ಣಗೌಡ ಗಡಿಗುಡಾಳ್ ರವರು ಇಂದು(1.4.2021) ಬೆಳಗ್ಗೆ 6.15 ಕ್ಕೆ ಗಡಿಗುಡಾಳದ ತಮ್ಮ ಸ್ವಗೃಹದಲ್ಲಿ ದೈವಾಧೀನರಾದ ಸುದ್ದಿ ತಲುಪಿತು. ಸಹಜವಾಗಿ ಮನಸ್ಸಿನಲ್ಲಿ ಅತೀವ ದುಃಖವಾಯಿತು. ಅವರ ಸಾನ್ನಿಧ್ಯದಲ್ಲಿ ಇದ್ದ ದಿನಗಳ ನೆನಪುಗಳು ಮನಸ್ಸಿನಲ್ಲಿ ಪ್ರಕಟಗೊಂಡು ಮತ್ತೆ ಪ್ರೇರಣೆಯ ಅನುಭವನ್ನೇ ನೀಡಿದವು. ಚಿತ್ರದುರ್ಗದ ಜಿಲ್ಲೆಯ ಮಾನ್ಯ ಜಿಲ್ಲಾ ಸಂಘಚಾಲಕ-ಬಳ್ಳಾರಿ ವಿಭಾಗ ಸಂಘಚಾಲಕರಾಗಿ, ಕರ್ನಾಟಕ ಉತ್ತರ ಪ್ರಾಂತದ ಮಾನ್ಯ ಸಹಸಂಘಚಾಲಕರಾಗಿ ಮತ್ತು ಕರ್ನಾಟಕ ಉತ್ತರದ ಮಾನ್ಯ ಪ್ರಾಂತ ಸಂಘಚಾಲಕರಾಗಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಮತ್ತು ಸಾರ್ಥಕವಾಗಿ ನಿರ್ವಹಿಸಿದ ಶ್ರೇಯಸ್ಸು ಅವರದ್ದು. ಭಾರತೀಯ ಕಿಸಾನ್ ಸಂಘದ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿಯೂ ಅವರ ಯೋಗದಾನ ಸ್ಮರಣೀಯ.
ಸದಾ ಪ್ರಸನ್ನರಾಗಿರುತ್ತಿದ್ದ ಸಿದ್ದಣ್ಣಗೌಡರು ಎಂದೂ ಕುಟುಂಬದ ಒಳಗುದಿಗಳನ್ನು ಮುಖದಲ್ಲಿ ಪ್ರಕಟಮಾಡುತ್ತಿರಲಿಲ್ಲ. ನಾವಾಗಿಯೇ ಕೆದಕಿದಾಗ ಒಂದೆರಡು ವಾಕ್ಯಗಳಲ್ಲಿ ಉತ್ತರಿಸಿ ಮತ್ತೆ ಸಂಘಕಾರ್ಯದ ವಿಷಯಕ್ಕೆ ಬರುತ್ತಿದ್ದರು. ಸದಾ ಕಾಲ ಸಂಘಕಾರ್ಯದ್ದೇ ಯೋಚನೆ ಮತ್ತು ರೈತರ ಕುರಿತಾಗಿಯೇ ಸಂವೇದನೆ ಅವರ ಮನಸ್ಸನ್ನು ಅವರಿಸಿರುತ್ತಿತ್ತು. ಈ ಕುರಿತು ಏನನ್ನಾದರೂ ಮಾಡದೇ ಇದ್ದರೆ ಅವರಿಗೆ ಸಮಾಧಾನ ಇರುತ್ತಿರಲಿಲ್ಲ. ಬರಗಾಲ ಬಂದಾಗಲಂತೂ ಹಗಲು-ರಾತ್ರಿ ದಣಿವರಿಯದೆ ಅವರು ಓಡಾಡಿದ್ದು ಇಂದಿಗೂ ನನಗೆ ಕಣ್ಣಿಗೆ ಕಟ್ಟಿದಂತಿದೆ.
ನಾನು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವರನ್ನು ಬಲ್ಲೆ. ನಾನು ಮತ್ತು ದಾವಣಗೆರೆಯ ರುದ್ರಯ್ಯನವರು ಅವರಿಂದ ಮಾರ್ಗದರ್ಶನ ಪಡೆಯಲು ನಮ್ಮ ಹೀರೊ ಮಜೆಸ್ಟಿಕ್ ನಲ್ಲಿ ಬರುತ್ತಿದ್ದದ್ದು ಈಗಲೂ ನೆನಪಾಗುತ್ತಿದೆ.
ಅವರ ಪಿತೃವಾತ್ಸಲ್ಯ ಮತ್ತು ಅವರ ಭೇಟಿಗೆ ಬಂದಾಗಲೆಲ್ಲ ಮಾತೃವಾತ್ಸಲ್ಯದಿಂದ ಸವಿಯಾದ ಊಟವನ್ನು ಉಣಬಡಿಸುತ್ತಿದ್ದ ಆ ಮಹಾತಾಯಿ ಈ ಇಬ್ಬರಿಂದಲೂ ನನಗೆ ನಿರಂತರ ಕಾರ್ಯ ಮಾಡಲು ಪ್ರೇರಣೆ ಸಿಕ್ಕಿದೆ.
ಜನತಾದಳದಲ್ಲಿ ಬಯಸಿದಷ್ಟೂ ಪ್ರಸಿದ್ಧಿ, ಅಷ್ಟುಮಾತ್ರವಲ್ಲದೇ ಮಂತ್ರಿಯ ಸ್ಥಾನದ ಅವಕಾಶ ಇತ್ಯಾದಿ ಎಲ್ಲವನ್ನೂ ಬಿಟ್ಟು ಲೌಕಿಕವಾಗಿ ಏನೂ ಸಿಗದ ‘ಸಂಘಕಾರ್ಯ’ ವನ್ನು ‘ಜೀವನಕಾರ್ಯ’ ವನ್ನಾಗಿ ಸ್ವೀಕರಿಸಿದರು. ಸಂಘಕಾರ್ಯ ಅವರ ಜೀವನದ ವ್ರತವಾಯಿತು.
ತಪಸ್ವಿಯಂತೆ ಈ ವ್ರತವನ್ನು ಪ್ರತಿಜ್ಞೆಯಲ್ಲಿ ಹೇಳಿದಂತೆ ಪಾಲಿಸಿದರು. ಅವರ ಅತ್ಯಂತ ಸರಳ ವ್ಯವಹಾರದಿಂದಾಗಿ ಮೊಮ್ಮಕ್ಕಳೂ ಸಹ ಅವರೊಂದಿಗೆ ಸ್ನೇಹಿತರಂತೆ ವ್ಯವಹರಿಸುತ್ತ ಅವರ ಸಾತ್ವಿಕ ಕೋಪದಿಂದ ಪಾಠವನ್ನೂ ಕಲಿತು ತಮ್ಮನ್ನು ತಿದ್ದಿಕೊಳ್ಳುತ್ತಿದ್ದರು. ಹೀಗಾಗಿ ಜನರೇಷನ್ ಗ್ಯಾಪ್ ಎಂಬ ಕೊರತೆಯಿಂದ ಸಿದ್ದಣ್ಣಗೌಡರು ಮುಕ್ತರಾಗಿದ್ದರು ಎಂದೇ ಹೇಳಬಹುದು.
ಒಟ್ಟಾರೆ ಆತ್ಮೀಯತೆ, ಅನುಶಾಸನ, ವಿನಮ್ರತೆ, ಶ್ರದ್ಧೆ, ಸಂವೇದನೆ ಮತ್ತು ಪರಿಶ್ರಮಗಳ ಪ್ರತಿಮೂರ್ತಿಯಾಗಿದ್ದ ಮಾನ್ಯ ಸಿದ್ದಣ್ಣಗೌಡರು ತಮ್ಮ ತಪಃಪೂತ ಬದುಕಿನಿಂದ ಒಂದು ವಾರಸಿಕೆಯನ್ನು ನಮಗೆ ಬಿಟ್ಟು ಹೋಗಿದ್ದಾರೆ. ಆ ವಾರಸಿಕೆಯನ್ನು ನಮ್ಮ ಜೀವನದಲ್ಲಿ ಮುಂದುವರೆಸುವುದೇ ನಾವು ಅವರಿಗೆ ಸಲ್ಲಿಸುವ ನೈಜ ಶ್ರದ್ದಾಂಜಲಿ.
ಅವರಿಗೆ ಭಗವಂತ ಸದ್ಗತಿ ನೀಡಲಿ ಮತ್ತು ಅವರ ಅಗಲಿಕೆಯಿಂದಾದ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ, ಅವರ ಅಪಾರ ಬಂಧು-ಮಿತ್ರ ವೃಂದಕ್ಕೆ ನೀಡಲಿ ಎಂದು ವಿನಮ್ರನಾಗಿ ಪ್ರಾರ್ಥಿಸುವೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

– ಶಂಕರಾನಂದ, ಅಖಿಲ ಭಾರತೀಯ ಸಹಸಂಘಟನಾ ಕಾರ್ಯದರ್ಶಿ ಭಾರತೀಯ ಶಿಕ್ಷಣ ಮಂಡಲ ನವ ದೆಹಲಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement