ಕಲಬುರಗಿ: ಹೋಳಿ ಪಂಚಮಿಯ ದಿನದಂದು ನಡೆಯುವ 18ನೇ ಶತಮಾನದ ಸಂತ, ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆಯುವ ಶ್ರೀ ಶರಣಬಸವೇಶ್ವರರ 199ನೇ ಜಾತ್ರೆಯ ಧಾರ್ಮಿಕ ಆಚರಣೆ ಹಾಗೂ ರಥೋತ್ಸವ ಪೋಲಿಸರ ಭದ್ರತಾ ವ್ಯವಸ್ಥೆ ಮಧ್ಯೆ ಸರಳವಾಗಿ ನಡೆಯಿತು.
ಬೆಳಿಗ್ಗೆಯಿಂದಲೇ ಶರಣಬಸವೇಶ್ವರ ದೇವಾಸ್ಥಾನದ ಎಲ್ಲ ಪ್ರವೇಶದ್ವಾರಕ್ಕೆ ಬ್ಯಾರಿಕೇಡ್ ಹಾಕುವ ಮೂಲಕ ಬಂದ್ ಮಾಡಲಾಗಿತ್ತು. ಆಯಾ ದ್ವಾರ ಬಾಗಿಲುಗಳ ಎದುರು ಪೋಲಿಸರು ನಿಂತಿದ್ದರು. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಬಾರದು ಮತ್ತು ಜನರ ದೊಡ್ಡ ಸಭೆಗೆ ಅವಕಾಶ ನೀಡಬಾರದು ಎಂಬ ಜಿಲ್ಲಾಡಳಿತದ ನಿರ್ಧಾರವನ್ನು ಪೋಲಿಸ್ ಸಿಬ್ಬಂದಿ ಅಚ್ಚುಕಟ್ಟಾಗಿ ನಿಭಾಯಿಸಿದರು. ಇಷ್ಟರ ಮಧ್ಯೆ ಅನೇಕ ಭಕ್ತಾದಿಗಳು ಆರಕ್ಷಕ ಸಿಬ್ಬಂಧಿ ಧಿಕ್ಕರಿಸಿ, ದೇವಾಲಯ ಆವರಣದಲ್ಲಿ ನಡೆಯುತ್ತಿದ್ದ ರಥೋತ್ಸವದಲ್ಲಿ ಭಾಗವಹಿಸಿದ್ದು ಕಂಡುಬಂದಿತು.ಪೂಜ್ಯ ಡಾ. ಅಪ್ಪಾಜಿಯವರು ಇದಕ್ಕೂ ಮುನ್ನ ಮುಂಜಾನೆ ಶರಣಬಸವೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ಅಭೀಷೆಕ, ಪೂಜೆ ಸಲ್ಲಿಸಿದರು. ಗುರು ಪಾದಪೂಜೆ ಕೈಗೊಳ್ಳುವ ಮೂಲಕ ಇನ್ನಿತ್ತರ ಧಾರ್ಮಿಕ ಸಮಾರಂಭಗಳನ್ನು ಆಚರಿಸುವಂತೆ ಭಕ್ತಾದಿಗಳಿಗೆ ಸೂಚಿಸಿದರು. ಮಧ್ಯಾಹ್ನದ ನಂತರ ಶುಭ ಘಳಿಗೆಯಲ್ಲಿ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ. ಚಿ. ದೊಡ್ಡಪ್ಪ ಅಪ್ಪಾಜಿ ಕುಂಭ ಪೂಜೆ ಕೈಗೊಂಡರು. ತದನಂತರ ಶೃಂಗಾರಗೊಂಡ ರಥಕ್ಕೆ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿ, ಭಕ್ತರಿಗೆ ಆರೋಗ್ಯ ಸಂಪತ್ತು ನೀಡುವಂತೆ ಶ್ರೀಶರಣರಿಗೆ ಪ್ರಾರ್ಥಿಸುದಾಗಿ ಹೇಳಿ, ಕೋವಿಡ್-19 ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕೆಂದು ದೇವರಲ್ಲಿ ಬೇಡಿಕೊಳ್ಳುವುದಾಗಿ ತಿಳಿಸಿದರು.ಡಾ. ಅಪ್ಪಾಜಿ ಅಂದು ಶ್ರೀ ಶರಣಬಸವೇಶ್ವರರು ಬಳಸುತ್ತಿದ್ದ, ಮಹಿಮೆಯಿಂದ ಕೂಡಿದ ಪರುಷ ಬಟ್ಟಲು, (ಬೆಳ್ಳಿಯ ಬಟ್ಟಲು) ಮತ್ತು ಲಿಂಗ ಸಜ್ಜಿಕೆಯನ್ನು ಭಕ್ತಾದಿಗಳಿಗೆ ಪ್ರದರ್ಶಿಸಿ, ಶಂಖ ಊದುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು


ನಿಮ್ಮ ಕಾಮೆಂಟ್ ಬರೆಯಿರಿ