ಮೈಸೂರು:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅನುದಾನ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಸ್ತಕ್ಷೇಪ ವಿರೋಧಿಸಿ ರಾಜ್ಯಪಾಲರಿಗೆ ಹಾಗೂ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದ ಸಚಿವ ಈಶ್ವರಪ್ಪ ಈಗ ಮತ್ತೊಮ್ಮೆ ತಾವು ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಚಾಮುಂಡಿದೇವಿ ದರ್ಶನದ ಬಳಿಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆ ಗಮನಕ್ಕೆ ತರದೆ ನೇರವಾಗಿ ಕೆಲವು ಶಾಸಕರಿಗೆ ಅನುದಾನ ಬಿಡುಗಡೆಯಾಗಿದೆ. ಬೆಂಗಳೂರು ನಗರ ಜಿ.ಪಂ ಒಂದಕ್ಕೆ 65 ಕೋಟಿ ರೂ. ಅನುದಾನ ಹಂಚಿಕೆಯಾಗಿರುವುದು ನಿಯಮದ ಉಲ್ಲಂಘನೆಯಾಗಿದೆ. ನನ್ನ ಗಮನಕ್ಕೆ ತರದೆ ಕ್ರಿಯಾಯೋಜನೆ ಮಾಡಿರುವುದು ತಪ್ಪು. ಈ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ಪತ್ರ ಬರೆದಿದ್ದೇನೆ. ನಿಯಮ ಮತ್ತು ಪ್ರಕ್ರಿಯೆ ಮೀರಿದ್ದನ್ನು ಪ್ರಶ್ನೆ ಮಾಡಿದ್ದೇನೆ ಎಂದು ತಾವು ರಾಜ್ಯಪಾಲರಿಗೆ ಪತ್ರ ಬರೆದ ಬಗ್ಗೆ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.
ರಾಜೀನಾಮೆ ಯಾಕೆ ಕೊಡಬೇಕು?: ನಾನು ಪ್ರಶ್ನೆ ಎತ್ತಿರುವುದು ನನ್ನ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವಿನ ವೈಯಕ್ತಿಕ ವಿಚಾರವಲ್ಲ. ನನ್ನ ಇಲಾಖೆಗೆ ಹಣಕಾಸು ಇಲಾಖೆ ಹಣ ನೀಡುತ್ತದೆ. ಆ ಹಣ ಖರ್ಚು ಮಾಡುವುದು ನನ್ನ ಇಲಾಖೆಯ ಹಕ್ಕು. ನನ್ನ ಗಮನಕ್ಕೆ ಬಾರದೇ ಕೆಲವಷ್ಟು ಹಣ ಖರ್ಚಾಗಿದೆ. ಇಲಾಖೆಯ ಜವಾಬ್ದಾರಿ ಹೊಂದಿರುವ ನಾನು ಈ ಬಗ್ಗೆ ಪ್ರಶ್ನೆ ಮಾಡಿದ್ದೇನೆ ಅಷ್ಟೆ. ರಾಜ್ಯಪಾಲರಿಗೆ ಪತ್ರ ಬರೆದ ವಿಷಯದ ಕುರಿತು ಕೆಲವರು ಶಾಸಕರು ನಾನು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೂ ರಾಜೀನಾಮೆ ಕೊಡಲು ಹೇಳುತ್ತಾರೆ, ನಾನು ರಾಜೀನಾಮೆ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದರು.
ನಾನು ರೆಬೆಲ್ ಅಲ್ಲ, ನಾನು ಲಾಯಲ್. ನನ್ನ ಇಡೀ ಜೀವನದಲ್ಲಿ ನಾನು ಪಕ್ಷಕ್ಕೆ ರೆಬೆಲ್ ಆಗಿಲ್ಲ, ಆಗುವುದೀ ಇಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಶುರು ಮಾಡಬೇಕು ಎಂದಾಗ ನಾನು ಮಾಡಬೇಡಿ ಎಂದು ಹೇಳಿದ್ದೆ.
ನೀವು ಪಕ್ಷ ಬಿಡಬೇಡಿ ಅಂದೆ. ಆದರೆ ಅಂದು ಅವರು ನನ್ನ ಮಾತು ಕೇಳಲಿಲ್ಲ. ನಾನು ಯಡಿಯೂರಪ್ಪ ಒಳ್ಳೆ ಸ್ನೇಹಿತರು.ಹೀಗಾಗಿ ಯಡಿಯೂರಪ್ಪ ಪಕ್ಷ ತೊರೆಯಲು ಮುಂದಾದಗ ನೋಡಿ ನೀವು ಪಕ್ಷ ಬಿಟ್ಟು ಹೋಗಿ ವಾಪಸ್ ಬರುವುದು ಸಮಸ್ಯೆಯಾಗುತ್ತದೆ ಎಂದು ಹೇಳಿದ್ದೆ. ಅದಕ್ಕೆ ಕೆಲವರು ನೀವು ಪಕ್ಷ ಕಟ್ಟಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದರು. ಆದರೆ. ಪಕ್ಷ ಕಟ್ಟಿದ ಮೇಲೆ ಯಾರೂ ಅವರ ಜೊತೆ ಹೋಗಲಿಲ್ಲ. ಅಂದು ಕೆಜೆಪಿ ಕಟ್ಟಿದಾಗ ಏನಾಯಿತು ? ಅವರಿಗೆ 6 ಸೀಟು ಬಂತು ನಮಗೆ 40 ಸೀಟು ಬಂತು. ಆ ನಂತರ ಮತ್ತೆ ಅವರ ಮಗನ ಮೂಲಕ ಮತ್ತೆ ಬಿಜೆಪಿಗೆ ಬರುತ್ತೇನೆ ಎಂದು ಹೇಳಿದರು. ಬಿಜೆಪಿಗೆ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ನಾನು ಡಿ.ಎಸ್ ಶಂಕರ್ ಮೂರ್ತಿ ಮಾತುಕತೆ ನಡೆಸಿದ್ದೆವು ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಕೆಲವರನ್ನು ತುಂಬಾ ನಂಬಿದ್ದಾರೆ. ಅದೇ ಅವತ್ತಿನ ಕೆಜೆಪಿ ಕಟ್ಟಲು ಕಾರಣ. ನೇರ ಅನುದಾನ ಬಿಡುಗಡೆ ಪ್ರಕರಣದಲ್ಲೂ ಇದೇ ರೀತಿ ಆಗಿದೆ ಎನ್ನುವುದು ನನ್ನ ಅಭಿಪ್ರಾಯ ಎಂದು ಬೇಸರ ವ್ಯಕ್ತ ಪಡಿಸಿದರು.
ಯಡಿಯೂರಪ್ಪ ಅವರು ಬಹಳ ಬೇಗ ಬೇರೆಯವರನ್ನು ನಂಬುತ್ತಾರೆ. ನನ್ನದು ಅವರದು ಇದೇ ಮೊದಲ ಸಂಘರ್ಷ ಅಲ್ಲ ಎಂಬುದು ನಿಜ. ಈ ಜನ್ಮದಲ್ಲಿ ಬಿಜೆಪಿ ಸೇರುವುದಿಲ್ಲ ಅಂತ ಹೇಳಿದ್ದರು. ಅದಕ್ಕೆ ನನ್ನ ಭಾಷೆಯಲ್ಲಿ ನಾನು ಉತ್ತರಿಸಿದ್ದೆ. ನಾನು ಆಗ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದೆ,
ಮೊದಲಿನಿಂದಲೂ ನಾನು ಸಂಘಕ್ಕೆ ಲಾಯಲ್. ಅಂದು ಅವರು ಕೆಜಿಪಿ ಅಧ್ಯಕ್ಷ ನಾನು ಬಿಜೆಪಿ ಅಧ್ಯಕ್ಷ. ನಮ್ಮಿಬ್ಬರ ನಡುವೆ ಅಂದು ವಾದ ವಿವಾದ ಆಗಿದೆ. ಅವರು ಯಾವ ಭಾಷೆಯಲ್ಲಿ ಮಾತನಾಡಿದರೋ ನಾನು ಅದೇ ಭಾಷೆಯಲ್ಲಿ ಉತ್ತರಿಸಿದ್ದೇನೆ. ಕೆಲವರು ಯಡಿಯೂರಪ್ಪ ಈಶ್ವರಪ್ಪ ನಡುವೆ ಹಳೆ ದ್ವೇಷ ಇದೆ ಎನ್ನುತ್ತಾರೆ. ಆದರೆ, ಅದು ದ್ವೇಷ ಅಲ್ಲ ಅಂದಿನಿಂದಲೂ ನಾನು ಪಾರ್ಟಿಗೆ ಲಾಯಲ್. ಅದಕ್ಕಾಗಿ ಅವರನ್ನು ವಿರೋಧಿಸಿದ್ದೆ. ಈಗಲೂ ತಪ್ಪಾಗಿದೆ ಅದಕ್ಕೆ ವಿರೋಧಿಸಿದ್ದೇನೆ. ಇದರಲ್ಲಿ ವೈಯುಕ್ತಿ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಕೆಲವು ಪತ್ರಿಕೆಗಳಲ್ಲಿ ಬಿಜೆಪಿಯಲ್ಲಿ ಈಶ್ವರಪ್ಪ ರೆಬೆಲ್ ಅಂತ ಹೇಳುತ್ತಿದ್ದಾರೆ, ನಾನು ಎಂದಿಗೂ ರೆಬೆಲ್ ಆಗುವುದಿಲ್ಲ. ಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತೇನೆ ಎನ್ನುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹೆದರುವ ಮನುಷ್ಯ ಅಲ್ಲ, ಕೆಲವು ಶಾಸಕರು ನೀವು ಮಾಡಿರುವುದು ಸರಿ ಎಂದು ಹೇಳುತ್ತಿದ್ದಾರೆ. ಕೆಲವರು ತಪ್ಪು ಎಂದು ಹೇಳುತ್ತಿದ್ದಾರೆ. ನನ್ನ ವಿರುದ್ಧ ಸಹಿ ಸಂಗ್ರಹ ಮಾಡುತ್ತಿರುವವರಿಗೂ ಮುಂದೆ ನಾನು ಮಾಡುತ್ತಿರುವುದು ಸರಿ ಎಂದು ಗೊತ್ತಾಗಲಿದೆ ಎಂದು ಸಚಿವ ಈಶ್ವರಪ್ಪ ಮಾರ್ಮಿಕವಾಗಿ ಹೇಳಿದರು.
ನಮ್ಮದು ಶಿಸ್ತಿನ ಪಕ್ಷ, ಅದೇ ಕಾರಣದಿಂದ ಯಾರು ಶಿಸ್ತು ಮೀರಬಾರದು ಎಂದು ಪತ್ರ ಬರೆದಿದ್ದೇನೆ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ ಅಷ್ಟೆ, ನಮ್ಮಪ್ಪ ಅಡಿಕೆ ಮಂಡಿ ಗುಮಾಸ್ತ, ನಮ್ಮಮ್ಮ ಅಡಿಕೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಪಕ್ಷ ನನ್ನನ್ನ ಡಿಸಿಎಂ ಹುದ್ದೆ ವರೆಗೂ ಕರೆದುಕೊಂಡು ಹೋಗಿದೆ. ನಾನು ಮಾಡಿದ್ದು ಸರಿ ಎಂದು ಕೆಲವರು ಹೇಳಿದ್ದಾರೆ. ಕೆಲವರು ತಪ್ಪು ಎಂದು ಹೇಳುತ್ತಿದ್ದಾರೆ. ಅವರಿಗೆ ನನ್ನ ದೃಷ್ಟಿಕೋನದಿಂದ ಮನವರಿಕೆ ಮಾಡಿಕೊಡುತ್ತೇನೆ. ಈ ವಿಚಾರದಲ್ಲಿ ಪಕ್ಷವೇ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು
ನಿಮ್ಮ ಕಾಮೆಂಟ್ ಬರೆಯಿರಿ