ಪಬ್ ಜಿ ಆನ್ಲೈನ್ ಆಟದ ಸೋಲು: ಬಾಲಕನ ಜೀವ ತೆಗೆದ ವ್ಯಕ್ತಿ

ಮಂಗಳೂರು : ಪಬ್ ಜಿ ಆನ್ಲೈನ್ ಆಟದಲ್ಲಿ ತನ್ನನ್ನು ನಿರಂತರ ಸೋಲಿಸುತ್ತಿದ್ದ ಎಂಬ ದ್ವೇಷಕ್ಕೆ ಓರ್ವ ಅಮಾಯಕ ಬಾಲಕ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
ಸಮೀಪದ ಉಳ್ಳಾಲದ ಕೆ.ಸಿ ರೋಡ್ ಕೊಮರಂಗಲ ನಿವಾಸಿ ಬಸ್ ಚಾಲಕ ಹನೀಫ್ ಎಂಬವರ ಪುತ್ರ ಆಕಿಫ್ (12) ಎಂಬ ಬಾಲಕನ ಮೃತದೇಹ ಉಳ್ಳಾಲದ ಮೈದಾನದಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿತ್ತು. ಆಕಿಫ್ ಕೆ.ಸಿ. ನಗರದ ಫಲಾಹ್ ಸ್ಕೂಲ್ ನಲ್ಲಿ ಆರನೇ ತರಗತಿ ವಿದ್ಯಾರ್ಥಿಯಾಗಿದ್ದ. ಶನಿವಾರ ರಾತ್ರಿ 9ರ ವೇಳೆಗೆ ಮನೆಯಿಂದ ತೆರಳಿದ್ದ ಆಕಿಫ್ ಹಿಂತಿರುಗಿ ಬಂದಿರಲಿಲ್ಲ. ಮನೆಯವರು ರಾತ್ರಿಯೇ ಆಕಿಫ್ ಗಾಗಿ ಶೋಧ ನಡೆಸಿದ್ದರು.
ಅನಂತರ ಆಕಿಫ್ ಜೊತೆಗೆ ಪಬ್ ಜಿ ಆಡುತ್ತಿದ್ದ ಸ್ಥಳೀಯ ಯುವಕ, ಉತ್ತರ ಪ್ರದೇಶ ಮೂಲದ ದೀಪಕ್ ಎಂಬಾತನ ಮನೆಗೆ ತೆರಳಿ ವಿಚಾರಿಸಿದ್ದಾರೆ. ಅನಂತರ ಆಕಿಫ್ ನಾಪತ್ತೆ ಕುರಿತು ರಾತ್ರಿಯೇ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಉಳ್ಳಾಲದ ಮೈದಾನದ ಸಮೀಪ ಭಾನುವಾರ ಬೆಳಿಗ್ಗೆ ಆಕಿಫ್‌ ಮೃತದೇಹ ಸಿಕ್ಕಿದೆ.ಆಗ ಪೊಲೀಸರು ಅನುಮಾನದ ಮೇಲೆ ದೀಪಕನನ್ನು ವಿಚಾರಿಸಿದಾಗ ಆತ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ದೀಪಕ್ ಆನ್ ಲೈನ್ ನಲ್ಲಿ ಆಕಿಫ್ ಜೊತೆ ಪಬ್ ಜಿ ಆಟ ಆಡುತ್ತಿದ್ದು, ಆಟದಲ್ಲಿ ಆಕಿಫ್ ದೀಪಕ್ ನನ್ನು ನಿರಂತರವಾಗಿ ಸೋಲಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ದೀಪಕ್ ಗೆ ಆಕಿಫ್ ನೊಂದಿಗೆ ದ್ವೇಷ ಬೆಳೆದಿದೆ. ಕೊನೆಗೆ ನೀನು ನನ್ನ ಜೊತೆ ನೇರವಾಗಿ ಆಟಕ್ಕೆ ಬಾ ಎಂದು ಶನಿವಾರ ರಾತ್ರಿ 9 ಗಂಟೆಗೆ ಆಕಿಫ್ ನನ್ನು ಕರೆದಿದ್ದ. ಹೀಗಾಗಿ ಆಕಿಫ್, ದೀಪಕ್ ಜೊತೆ ಸಮೀಪದ ಫಲಾಹ್ ಸ್ಕೂಲ್ ಬಳಿಗೆ ತೆರಳಿದ್ದ. ಅಲ್ಲಿ ಇಬ್ಬರೂ ಆಟವಾಡಿದ್ದು, ಈ ವೇಳೆ ಆಕಿಫ್ ಸೋತಿದ್ದ ಎಂದು ದೀಪಕ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕಿಫ್ ಆಟದಲ್ಲಿ ಸೋತಿದ್ದನ್ನು ದೀಪಕ್ ಹೀಯಾಳಿಸಿದ್ದರಿಂದ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಆಗ ಕೋಪದಲ್ಲಿ ಆರೋಪಿ ದೀಪಕ್ ಬಾಲಕನಿಗೆ ಎಸೆದಿದ್ದು, ಇದರಿಂದ ತಲೆ, ಮುಖಕ್ಕೆ ಗಂಭೀರ ಗಾಯವಾಗಿ ಆಕಿಫ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದನ್ನು ಗಮನಿಸಿ, ತಕ್ಷಣವೇ ಕಾಂಪೌಂಡ್ ಗೋಡೆಯ ಬದಿಗೆ ಒಯ್ದು ಮಲಗಿಸಿ ಏನೂ ಆಗಿಲ್ಲವೆಂಬಂತೆ ಮನೆಗೆ ದೀಪಕ ಹಿಂತಿರುಗಿದ್ದಾನೆ. ಅನುಮಾನದ ಮೇಲೆ ದೀಪಕನನ್ನು ತನಿಖೆ ನಡೆಸಿದ ಪೊಲೀಸರಿಗೆ ಈತ ವಿಷಯ ಬಾಯಬಿಟ್ಟಿದ್ದಾನೆ. ಪೊಲೀಸ್ ಕಮಿಷನರ್ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದು, ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.ಆರೋಪಿ ದೀಪಕ್ ಉತ್ತರ ಪ್ರದೇಶ ಮೂಲದವ.

ಪ್ರಮುಖ ಸುದ್ದಿ :-   ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement