ಕೊಯಮತ್ತೂರು:ಬಿಲ್ ಪಾವತಿ ವಿಚಾರದಲ್ಲಿ ತೇಜಸ್ವಿ ಟ್ವೀಟ್‌ ಗೆ ರೆಸ್ಟೊರೆಂಟಿನಿಂದಲೂ ಟ್ವೀಟ್‌ ಉತ್ತರ

ಕೊಯಮತ್ತೂರು: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ವನತಿ ಶ್ರೀನಿವಾಸನ್ ಪರ ಪ್ರಚಾರಕ್ಕೆ ಕೊಯಮತ್ತೂರಿಗೆ ಬಂದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಲ್ಲಿನ ರೆಸ್ಟೊರೆಂಟ್ ಒಂದಕ್ಕೆ ಭೇಟಿ ನೀಡಿದ್ದು, ಬಿಲ್ ಪಾವತಿ ಸಂಬಂಧ ಟ್ವೀಟ್ ಮಾಡಿದ್ದರು.
ಟ್ವೀಟ್‌ನಲ್ಲಿ ತೇಜಸ್ವಿ ಸೂರ್ಯ ಡಿಎಂಕೆ ಬಗ್ಗೆ ಉಲ್ಲೇಖಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇದೀಗ ತೇಜಸ್ವಿ ಸೂರ್ಯ ಅವರಿಗೆ ರೆಸ್ಟೊರೆಂಟ್ ಪ್ರತಿಕ್ರಿಯೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟ್ಟರ್‌ನಲ್ಲಿ ರೆಸ್ಟೊರೆಂಟ್‌ಗೆ ಹೋಗಿದ್ದ ಫೋಟೊ ಹಂಚಿಕೊಂಡಿದ್ದ ತೇಜಸ್ವಿ ಸೂರ್ಯ, ” ರೆಸ್ಟೊರೆಂಟ್‌ನಲ್ಲಿ ಉಪಾಹಾರದ ಬಳಿಕ ಹಣ ಪಾವತಿ ಮಾಡಲು ಹೋದೆ. ಆದರೆ ಅಲ್ಲಿದ್ದ ಕ್ಯಾಶಿಯರ್ ಹಣ ಪಡೆಯಲು ಹಿಂಜರಿದರು. ಬಳಿಕ ಬಹಳ ಹಿಂಜರಿಕೆಯಿಂದಲೇ ಹಣ ಸ್ವೀಕರಿಸಿದರು. ಆ ವೇಳೆ ನಾನು ಅವರಿಗೆ ಒಂದು ಮಾತು ಹೇಳಿದೆ, ನಾವು ಬಿಜೆಪಿಯವರು. ನಮ್ಮ ಪಕ್ಷ ಎಲ್ಲರನ್ನೂ ಗೌರವಿಸುತ್ತದೆ. ಸಣ್ಣ ಸಣ್ಣ ಉದ್ಯಮಿಗಳಿಂದ ರೋಲ್ ಕಾಲ್ ಮಾಡಲು ನಾವು ಡಿಎಂಕೆ ಅಲ್ಲ” ಎಂದು ಪೋಸ್ಟ್ ಹಾಕಿದ್ದರು.
ಈ ಪೋಸ್ಟ್ ಹಾಕುತ್ತಿದ್ದಂತೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಸ್ವತಃ ತೇಜಸ್ವಿ ಸೂರ್ಯ ಭೇಟಿ ನೀಡಿದ್ದ ಶ್ರೀ ಅನ್ನಪೂರ್ಣ ಶ್ರೀ ಗೌರಿಶಂಕರ್ ರೆಸ್ಟೊರೆಂಟ್ ಸಾಮಾಜಿಕ ಜಾಲತಾಣದಲ್ಲೇ ಪ್ರತಿಕ್ರಿಯೆ ನೀಡಿದೆ.
ಫೇಸ್‌ಬುಕ್‌ನಲ್ಲಿ ರೆಸ್ಟೊರೆಂಟ್ ಕಡೆಯಿಂದ ಪೋಸ್ಟ್ ಪ್ರಕಟವಾಗಿದ್ದು, “ಡಿಯರ್ ತೇಜಸ್ವಿ ಸೂರ್ಯ, ನಮ್ಮ ರೆಸ್ಟೊರೆಂಟ್‌ನಲ್ಲಿ ನಿಮಗೆ ಸೇವೆ ಸಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ನಮ್ಮ ರೆಸ್ಟೊರೆಂಟ್‌ನಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿ ಹಾಗೂ ಕೃತಜ್ಞತೆಯಿಂದ ಕಾಣುತ್ತೇವೆ. ಇಲ್ಲಿಗೆ ಬಂದ ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸುತ್ತಾರೆ. ಯಾರೂ ನಮ್ಮನ್ನು ಉಚಿತವಾಗಿ ಸೇವೆ ಕೊಡಲು ಹೇಳುವುದಿಲ್ಲ. ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಕೆಲವೊಮ್ಮೆ ನಾವು ಹಣ ಪಡೆದುಕೊಳ್ಳುವುದಿಲ್ಲ ಅಷ್ಟೆ” ಎಂದು ಪ್ರತಿಕ್ರಿಯೆ ನೀಡಲಾಗಿದೆ.
ಈ ಪ್ರತಿಕ್ರಿಯೆ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉಪಾಹಾರದ ವಿಷಯದಲ್ಲೂ ರಾಜಕೀಯ ತೋರುತ್ತೀರಲ್ಲ ಎಂದು ತೇಜಸ್ವಿ ವಿರುದ್ಧ ಟೀಕೆಗಳು ಕೇಳಿಬಂದಿವೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement