ಸಾರಿಗೆ ಸಿಬ್ಬಂದಿ ಆತ್ಮಹತ್ಯೆ: ಅಧಿಕಾರಿಗಳ ಕಿರುಕುಳ ಎಂದ ಸಂಘಟನೆಗಳು, ಅತಿಯಾದ ಸಾಲ ಕಾರಣ ಎಂದ ಸಾರಿಗೆ ಸಚಿವರು

posted in: ರಾಜ್ಯ | 0

ಬೆಳಗಾವಿ/ಬೀದರ; ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟ ನಡುವೆಯೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲಿ ಸಾರಿಗೆ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಾರಿಗೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಸಂಘಟನೆಗಳು ಆರೋಪಿಸಿವೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ ಶಿವಕುಮಾರ ನೀಲಗಾರ (40) ಆತ್ಮಹತ್ಯೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮನೆಯಲ್ಲಿ ಶಿವಕುಮಾರ ನೇಣಿಗೆ ಶರಣಾಗಿದ್ದಾರೆ. ಇವರು ಸವದತ್ತಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.
ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ಕಿರುಕುಳ ನೀಡಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಷ್ಕರ ನಡೆಯುತ್ತಿದ್ದರೂ ಕೆಲಸಕ್ಕೆ ಬರುವಂತೆ ಅಧಿಕಾರಿಗಳು ಒತ್ತಡ ಹಾಕಿ ಕೆಲಸಕ್ಕೆ ಬಾರದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಶಿವಕುಮಾರ ನೀಲಗಾರ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗದ ಸವದತ್ತಿ ಘಟಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಸವದತ್ತಿಯಲ್ಲಿರುವ ಮನೆಯಲ್ಲಿಯೇ ಶುಕ್ರವಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಆದರೆ ಸಾರಿಗೆ ಸಚಿವ ಲಕ್ಷ್ಮನ ಸವದಿ ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿರುವುದು ಸಾರಿಗೆ ಅಧಿಕಾರಿಗಳ ಕಿರುಕುಳದಿಂದ ಅಲ್ಲ, ಬದಲಾಗಿ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಬೀದರ್ ಜಿಲ್ಲೆ ಹುಮ್ನಾಬಾದ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಸವದಿ, ಅತಿಯಾದ ಸಾಲದಿಂದ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಹೊರತು ಯಾರ ಕಿರುಕುಳದಿಂದಲೂ ಅಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಕಿರುಕುಳಕ್ಕೆ ಆತ್ಮಹತ್ಯೆ ಎಂದು ಸಾರಿಗೆ ಸಂಘಟನೆಗಳು ಇಲಾಖೆ ಮೇಲೆ ಕೆಟ್ಟ ಹೆಸರು ಬರುವಂತೆ ಆರೋಪಿಸುತ್ತಿದ್ದಾರೆ. ಆದರೆ ಸವದತ್ತಿಯಲ್ಲಿ ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಲದ ಕಾರಣದಿಂದಾಗಿ ಎಂದು ಹೇಳಿದರು.
ಇನ್ನು ಶುಕ್ರವಾರದಿಂದ 1000ಕ್ಕೂ ಹೆಚ್ಚು ಸರ್ಕಾರಿ ಬಸ್ ಗಳು ಸಂಚರಿಸುತ್ತಿವೆ. ನಮ್ಮ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಿದ್ದಾರೆ. ತಮಗೆ ಸಂಬಳ ಹೆಚ್ಚಿಸಿದರೆ ಸಾಕು ಎಂದು ಹೇಳುತ್ತಿದ್ದಾರೆ. ಆದರೆ ಮುಷ್ಕರ ನಿರತರು ನಮ್ಮ ಸಿಬ್ಬಂದಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಹಾಜರಾಗದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ